ಬೀಜಿಂಗ್: ವಯಸ್ಸಾದ ಸಮಾಜ ಮತ್ತು ಕುಸಿಯುತ್ತಿರುವ ಜನನ ಪ್ರಮಾಣಗಳ ಕಾರಣದಿಂದ ಚೀನಾ ಇತ್ತೀಚಿನ ವರ್ಷಗಳಲ್ಲಿ ಮೊದಲ ಬಾರಿಗೆ ತನ್ನ ಒಟ್ಟಾರೆ ಜನಸಂಖ್ಯೆಯಲ್ಲಿ ಕುಸಿತವಾಗಿದೆ ಎಂದು ಘೋಷಿಸಿದೆ. ಚೀನಾದ ರಾಷ್ಟ್ರೀಯ ಅಂಕಿಅಂಶಗಳ ಬ್ಯೂರೋ ಪ್ರಕಾರ- 2021ನೇ ವರ್ಷಕ್ಕೆ ಹೋಲಿಸಿದರೆ 2022 ರ ಅಂತ್ಯದ ವೇಳೆಗೆ ದೇಶವು 8,50,000 ಕಡಿಮೆ ಜನರನ್ನು ಹೊಂದಿದೆ ಎಂದು ವರದಿ ಮಾಡಿದೆ. ಇದು ಹಾಂಗ್ ಕಾಂಗ್ ಮತ್ತು ಮಕಾವೊ ಮತ್ತು ವಿದೇಶಿ ನಿವಾಸಿಗಳನ್ನು ಹೊರತುಪಡಿಸಿ ಚೀನಾದ ಮುಖ್ಯ ಭೂಭಾಗದ ಜನಸಂಖ್ಯೆಯನ್ನು ಮಾತ್ರ ಒಳಗೊಂಡಿದೆ. ಒಟ್ಟಾರೆಯಾಗಿ ದೇಶದ ಜನಸಂಖ್ಯೆ 1.411.75 ಶತಕೋಟಿ ಇದ್ದು, ಕಳೆದ ವರ್ಷದಲ್ಲಿ 9.56 ಮಿಲಿಯನ್ ಜನನಗಳು ಹಾಗೂ 10.41 ಮಿಲಿಯನ್ ಸಾವುಗಳು ಸಂಭವಿಸಿವೆ ಎಂದು ಬ್ಯೂರೋ ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ.
ಬದುಕು ದುಬಾರಿ: ಮಹಿಳೆಯರ ಸಂಖ್ಯೆ 689.69 ಇದ್ದರೆ ಪುರುಷರ ಸಂಖ್ಯೆ 689.69 ಮಿಲಿಯನ್ ಇದೆ. 2016 ರವರೆಗೆ ಚೀನಾದಲ್ಲಿ ಕುಟುಂಬಕ್ಕೊಂದೇ ಮಗು ಎಂಬ ನಿಯಮ ಜಾರಿಯಲ್ಲಿತ್ತು. ಈ ನಿಯಮ ಕೊನೆಗೊಂಡ ನಂತರ ಚೀನಾವು ಕುಟುಂಬಗಳಿಗೆ ಎರಡನೇ ಅಥವಾ ಮೂರನೇ ಮಕ್ಕಳನ್ನು ಹೊಂದಲು ಪ್ರೋತ್ಸಾಹಿಸಲು ಪ್ರಯತ್ನಿಸಿದೆ. ಆದರೆ ಇದರಲ್ಲಿ ಅಂಥ ಯಶಸ್ಸು ಸಿಕ್ಕಿಲ್ಲ. ಚೀನಾದ ನಗರಗಳಲ್ಲಿ ಮಕ್ಕಳನ್ನು ಸಾಕಿ ಬೆಳೆಸುವುದು ಬಹಳ ದುಬಾರಿಯಾಗಿರುವ ಕಾರಣದಿಂದ ದಂಪತಿಗಳು ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಪಡೆಯಲು ಇಷ್ಟಪಡುವುದಿಲ್ಲ ಎನ್ನಲಾಗಿದೆ. ಇದೇ ಕಾರಣದಿಂದ ಪೂರ್ವ ಏಷ್ಯಾದ ಬಹುತೇಕ ಪ್ರದೇಶಗಳಲ್ಲಿ ಜನನ ದರಗಳು ಕೊಂಚ ಕಡಿಮೆಯಾಗಿವೆ.
ಭಾರತ ನಂಬರ್ 1?: ಚೀನಾ ಬಹಳ ಹಿಂದಿನಿಂದಲೂ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿದೆ. ಆದರೆ ಶೀಘ್ರದಲ್ಲೇ ಭಾರತವು ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕುವ ನಿರೀಕ್ಷೆಯಿದೆ. ಅಂದಾಜಿನ ಪ್ರಕಾರ ಭಾರತದ ಜನಸಂಖ್ಯೆಯು 1.4 ಶತಕೋಟಿಗಿಂತ ಹೆಚ್ಚಾಗಿದೆ ಮತ್ತು ಬೆಳೆಯುತ್ತಲೇ ಇದೆ. 1950 ರ ದಶಕದ ಅಂತ್ಯದಲ್ಲಿ ಗ್ರೇಟ್ ಲೀಪ್ ಫಾರ್ವರ್ಡ್ ಸಮಯದಲ್ಲಿ ಚೀನಾವು ಕೊನೆಯ ಬಾರಿಗೆ ಜನಸಂಖ್ಯೆಯ ಕುಸಿತವನ್ನು ದಾಖಲಿಸಿತ್ತು ಎಂದು ಹೇಳಲಾಗಿದೆ. ಸಾಮೂಹಿಕ ಕೃಷಿ ಮತ್ತು ಕೈಗಾರಿಕೀಕರಣಕ್ಕಾಗಿ ಮಾವೋ ಝೆಡಾಂಗ್ ಅವರ ವಿನಾಶಕಾರಿ ಆಡಳಿತವು ಹತ್ತಾರು ಮಿಲಿಯನ್ ಜನರನ್ನು ಕೊಲ್ಲುವ ಬೃಹತ್ ಕ್ಷಾಮವನ್ನು ಉಂಟುಮಾಡಿತ್ತು.