ಬೀಜಿಂಗ್:ಅಮೆರಿಕ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ತೈವಾನ್ ಭೇಟಿಗೆ ಪ್ರತಿಕ್ರಿಯೆಯಾಗಿ ಉದ್ದೇಶಿತ ಮಿಲಿಟರಿ ಕ್ರಮಗಳನ್ನು ಪ್ರಾರಂಭಿಸುವುದಾಗಿ ಚೀನಾ ಹೇಳಿದೆ. "ಚೀನಿ ಪೀಪಲ್ಸ್ ಲಿಬರೇಶನ್ ಆರ್ಮಿಯು ಹೆಚ್ಚಿನ ಎಚ್ಚರಿಕೆ ವಹಿಸಿದ್ದು, ರಾಷ್ಟ್ರೀಯ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ದೃಢವಾಗಿ ರಕ್ಷಿಸಲು, ಬಾಹ್ಯ ಹಸ್ತಕ್ಷೇಪ ಹಾಗೂ ಪ್ರತ್ಯೇಕತಾವಾದಿ ಪ್ರಯತ್ನಗಳನ್ನು ದೃಢವಾಗಿ ತಡೆಯಲು ಉದ್ದೇಶಿತ ಮಿಲಿಟರಿ ಕಾರ್ಯಾಚರಣೆಗಳ ಸರಣಿಯನ್ನು ಪ್ರಾರಂಭಿಸಲಾಗುವುದು ಎಂದು ನ್ಯಾನ್ಸಿ ಪೆಲೋಸಿ ತೈವಾನ್ ಭೇಟಿಯನ್ನು ಖಂಡಿಸಿ ನೀಡಿದ ಪ್ರಕಟಣೆಯಲ್ಲಿ ಚೀನಾ ರಕ್ಷಣಾ ಸಚಿವಾಲಯದ ವಕ್ತಾರ ವು ಕಿಯಾನ್ ತಿಳಿಸಿದ್ದಾರೆ.
ಮಂಗಳವಾರ ರಾತ್ರಿ ತೈವಾನ್ಗೆ ಅಮೆರಿಕದ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಬಂದಿಳಿದ ಕೆಲವೇ ನಿಮಿಷಗಳಲ್ಲಿ, ತೈವಾನ್ನಲ್ಲಿ ದೀರ್ಘ-ಶ್ರೇಣಿಯ ಜೀವಂತ ಮದ್ದುಗುಂಡುಗಳನ್ನು ಬಳಸುವುದು ಸೇರಿದಂತೆ ದ್ವೀಪದಾದ್ಯಂತ ಜಂಟಿ ಮಿಲಿಟರಿ ಕಾರ್ಯಾಚರಣೆಗಳ ಸರಣಿಯನ್ನು ತಕ್ಷಣವೇ ಪ್ರಾರಂಭಿಸುವುದಾಗಿ ಚೀನಾ ಹೇಳಿದೆ.
ಪೀಪಲ್ಸ್ ಲಿಬರೇಶನ್ ಆರ್ಮಿ ಈಸ್ಟರ್ನ್ ಥಿಯೇಟರ್ ಕಮಾಂಡ್ನ ಪ್ರಕಟಣೆಯು ಮಂಗಳವಾರ ರಾತ್ರಿಯಿಂದ ಸಮುದ್ರದಲ್ಲಿ ಮತ್ತು ತೈವಾನ್ ಸುತ್ತಮುತ್ತಲಿನ ಪ್ರದೇಶ ಮಿಲಿಟರಿ ಕಾರ್ಯಾಚರಣೆ ನಡೆಸಲಾಗುವುದು ಎಂದು ಚೀನಾ ಘೋಷಿಸಿದೆ. ಈಸ್ಟರ್ನ್ ಥಿಯೇಟರ್ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) ಯ ಐದು ಜಂಟಿ ಕಮಾಂಡ್ಗಳಲ್ಲಿ ಒಂದಾಗಿದೆ. ಇದು ಚೀನಾದ ಪೂರ್ವ ಕರಾವಳಿ ಪ್ರಾಂತ್ಯಗಳಾದ ಫುಜಿಯಾನ್ ಮತ್ತು ಝೆಜಿಯಾಂಗ್ನ ಮೇಲೆ ಅಧಿಕಾರ ವ್ಯಾಪ್ತಿ ಹೊಂದಿದೆ.
ನ್ಯಾನ್ಸಿ ಪೆಲೋಸಿ ಅವರು ತಮ್ಮ ಏಷ್ಯಾ ಪ್ರವಾಸದ ವೇಳೆ ತೈವಾನ್ಗೆ ಭೇಟಿ ನೀಡುವುದಕ್ಕೆ, ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಚೀನಾ, ಅಮೆರಿಕ 'ತಕ್ಕ ಬೆಲೆ' ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು. ತೈವಾನ್ ಸುತ್ತುವರೆದಿರುವ ಆರು ಪ್ರಮುಖ ವಲಯಗಳಲ್ಲಿ ಚೀನಾ ಸೇನೆಯು ಸಮರಾಭ್ಯಾಸ ನಡೆಸುವುದಾಗಿ ಚೀನಾ ಸೇನೆ ಹೇಳಿದೆ. ಯುದ್ಧ ಅಭ್ಯಾಸಗಳು, ತರಬೇತಿ ಚಟುವಟಿಕೆಗಳು ಹಾಗೂ ಫೈರಿಂಗ್ ಸಹ ನಡೆಸುವುದಾಗಿ ತಿಳಿಸಿದೆ.
ಗುರುವಾರದಿಂದ ಭಾನುವಾರದವರೆಗೂ ಈ ಚಟುವಟಿಕೆಗಳು ನಡೆಯಲಿವೆ.'ಚೀನಾ ತನ್ನ ಭೌಗೋಳಿಕ ಸಮಗ್ರತೆಯ ರಕ್ಷಣೆಗಾಗಿ ಎಲ್ಲ ಅಗತ್ಯ ಕ್ರಮಗಳನ್ನು ವಹಿಸಲಿದೆ. ಮುಂದಿನ ಎಲ್ಲ ಪರಿಣಾಮಗಳಿಗೂ ಅಮೆರಿಕ, ತೈವಾನ್ ಪ್ರತ್ಯೇಕತಾ ಪಡೆಗಳು ಹೊಣೆಯಾಗಿರುತ್ತವೆ' ಎಂದು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಎಚ್ಚರಿಕೆ ಕೂಡಾ ನೀಡಿದ್ದಾರೆ.