ಜಿನೀವಾ(ಸ್ವಿಟ್ಜರ್ಲೆಂಡ್):ಕೋವಿಡ್ ನಂತರ ಚೀನಾದಲ್ಲಿ ಮೊತ್ತೊಂದು ನಿಗೂಢ ಕಾಯಿಲೆಯ ಹಾವಳಿ ಕಂಡುಬರುತ್ತಿದೆ. ಈ ಕಾಯಿಲೆ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಸಂಪೂರ್ಣಮಾಹಿತಿ ನೀಡುವಂತೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಹೆಚ್ಒ) ಚೀನಾಕ್ಕೆ ಕೇಳಿದೆ.
ಚೀನಾದಲ್ಲಿ ಮೈಕೋಪ್ಲಾಸ್ಮಾ ನ್ಯುಮೋನಿಯಾ ಮತ್ತು ಇನ್‌ಫ್ಲುಯೆಂಜಾ ಜ್ವರ ಪ್ರಕರಣಗಳು ಹೆಚ್ಚುತ್ತಿವೆ ಎಂದು ಡಬ್ಲ್ಯೂಹೆಚ್ಒ ಗುರುವಾರ ಹೇಳಿದೆ. ಅನೇಕ ಸಾಂಕ್ರಾಮಿಕ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಗಳ ಏಕಾಏಕಿ ಹೆಚ್ಚಳವಾಗಿದೆ. ಈ ತಿಂಗಳಾರಂಭದಲ್ಲಿ ಚೀನಾದ ತಜ್ಞರು ಎಚ್ಚರಿಕೆ ನೀಡಿದ್ದರು. ಪ್ರಸಕ್ತ ಚಳಿಗಾಲದಲ್ಲಿ ಮತ್ತೆ ಕೋವಿಡ್-19 ಸೋಂಕು ಹೆಚ್ಚಾಗುವ ಸಾಧ್ಯತೆಯಿದೆ. ವಯಸ್ಸಾದವರು ಮತ್ತು ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಲಸಿಕೆ ಹಾಕಲು ತಿಳಿಸಲಾಗಿತ್ತು.
ಜಿನೀವಾದಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಹೆಚ್ಒ) ನೀಡಿದ ಹೇಳಿಕೆಯಲ್ಲಿ, ಮಕ್ಕಳಲ್ಲಿ ನ್ಯುಮೋನಿಯಾ ಪ್ರಕರಣಗಳ ಹೆಚ್ಚುವರಿ ಕ್ಲಿನಿಕಲ್ ಮಾಹಿತಿ ಮತ್ತು ಪರೀಕ್ಷಾ ಫಲಿತಾಂಶಗಳ ಬಗ್ಗೆ ನಾವು ಚೀನಾದಿಂದ ಮಾಹಿತಿಯನ್ನು ಕೋರಲಾಗಿದೆ. ವಾಸ್ತವವಾಗಿ, ಕೋವಿಡ್ಗೆ ಸಂಬಂಧಿಸಿದ ಕಠಿಣ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ಚೀನಾದಲ್ಲಿ ಇದು ಮೊದಲ ಚಳಿಗಾಲ ಎಂದು ತಜ್ಞರು ತಿಳಿಸುತ್ತಾರೆ. ಈ ಹವಾಮಾನವು ಮಕ್ಕಳ ಮೇಲೆ ಬಹಳ ಕೆಟ್ಟ ಪರಿಣಾಮ ಬೀರಿದೆ. ಕಾಯಿಲೆಯ ಪ್ರಕರಣಗಳ ಸಂಖ್ಯೆ ತುಂಬಾ ಹೆಚ್ಚಾಗುತ್ತಿವೆ ಎಂದಿದೆ.
ನಿಗೂಢ ಕಾಯಿಲೆ ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಮುನ್ನಚ್ಚರಿಕೆ ಕ್ರಮವಾಗಿ ಡಬ್ಲ್ಯೂಹೆಚ್ಒ ಚೀನಾದಿಂದ ಹೆಚ್ಚವರಿ ಅಗತ್ಯ ಮಾಹಿತಿ ಒದಗಿಸುವಂತೆ ತಿಳಿಸಿದೆ. ಏಕೆಂದರೆ, 2019ರಲ್ಲಿ ಕರೋನ ವೈರಸ್ ಏಕಾಏಕಿ ಕಾಣಿಸಿಕೊಂಡಿತ್ತು. ಈ ಬಗ್ಗೆ ಡಬ್ಲ್ಯೂಹೆಚ್ಒ, ಚೀನಾದ ಬೀಜಿಂಗ್‌ನಿಂದ ಸಮಯೋಚಿತ ವರದಿ ಕೇಳದಿರುವ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಲಾಗಿತ್ತು. ಇದರಿಂದ ಡಬ್ಲ್ಯೂಹೆಚ್ಒ ಟೀಕೆಗಳನ್ನು ಎದುರಿಸಬೇಕಾಯಿತು. ನಂತರ ಈ ರೋಗವು ಪ್ರಪಂಚದಾದ್ಯಂತ ಹರಡಿತು. ಇದರಿಂದ ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡಿದ್ದರು.
ಇನ್ಫ್ಲುಯೆನ್ಸ, SARS-CoV-2, ಆರ್ಎಸ್ವಿ ಮತ್ತು ಮೈಕೋಪ್ಲಾಸ್ಮಾ ನ್ಯುಮೋನಿಯಾ ಸೇರಿದಂತೆ ವಿವಿಧ ರೋಗಗಳ ಹರಡುವಿಕೆಯ ಇತ್ತೀಚಿನ ಸ್ಥಿತಿಗತಿಗಳು ಹಾಗೂ ಆರೋಗ್ಯ ರಕ್ಷಣಾ ವ್ಯವಸ್ಥೆಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಾವು ವಿನಂತಿಸಿದ್ದೇವೆ. ಜೊತೆಗೆ ನಮ್ಮ ಅಸ್ತಿತ್ವದಲ್ಲಿರುವ ತಾಂತ್ರಿಕ ಪಾಲುದಾರಿಕೆ ಮತ್ತು ನೆಟ್ವರ್ಕ್ಗಳ ಮೂಲಕ ಚೀನಾದಲ್ಲಿನ ವೈದ್ಯರು ಮತ್ತು ವಿಜ್ಞಾನಿಗಳೊಂದಿಗೆ ಸಂಪರ್ಕದಲ್ಲಿದೆ ಎಂದು ಡಬ್ಲ್ಯೂಹೆಚ್ಒ ತಿಳಿಸಿದೆ.