ತೈಪೆ (ತೈವಾನ್) :ವಿಸ್ತರಣಾ ಮಹತ್ವಾಕಾಂಕ್ಷಿ ಚೀನಾ, ದ್ವೀಪರಾಷ್ಟ್ರ ತೈವಾನ್ ಮೇಲೆ ಕಣ್ಣು ಹಾಕಿದ್ದು, ತೈವಾನ್ಗೆ ಬೆಂಗಾವಲಾಗಿ ಅಮೆರಿಕ ಇರುವುದು ಗೊತ್ತೇ ಇದೆ. ಪುಟ್ಟದ್ವೀಪದ ವಿಚಾರದಲ್ಲಿ ವಿಶ್ವದ ಎರಡು ದೈತ್ಯ ರಾಷ್ಟ್ರಗಳು ಕಿತ್ತಾಟಕ್ಕಿಳಿದಿದ್ದು, ಈಗ ಅದು ಮತ್ತೊಂದು ಮಜಲಿಗೆ ಹೋಗುವ ಸಾಧ್ಯತೆ ಇದೆ. ಕಾರಣ, ಅಮೆರಿಕ ಸಂಸತ್ತು ತೈವಾನ್ಗೆ ಮಿಲಿಟರಿ ಆರ್ಥಿಕ ನೆರವು ನೀಡಲು ಘೋಷಣೆ ಮಾಡಿರುವುದು.
ತೈಪೆಗೆ ಅಮೆರಿಕ 345 ಮಿಲಿಯನ್ ಡಾಲರ್ (2838 ಕೋಟಿ ರೂಪಾಯಿ) ಮಿಲಿಟರಿ ನೆರವಿನ ಪ್ಯಾಕೇಜ್ ಘೋಷಿಸಿದೆ. ಇದು ಚೀನಾದ ಕಣ್ಣು ಕೆಂಪಾಗಿಸಿದೆ. ಇದಕ್ಕೆ ಉರಿದು ಬಿದ್ದಿರುವ ಡ್ರ್ಯಾಗನ್ ರಾಷ್ಟ್ರ, ತೈವಾನ್ ಅನ್ನು ಅಮೆರಿಕ ಯುದ್ಧ ಸಾಮಗ್ರಿ ಡಿಪೋವಾಗಿ ಪರಿವರ್ತಿಸಿದೆ. ಏನೇ ಆದರೂ, ಅದರ ಆಟ ನಡೆಯಲು ಬಿಡಲ್ಲ. ಎರಡೂ ರಾಷ್ಟ್ರಗಳನ್ನು ಏಕೀಕರಿಸುವ ತನ್ನ ಉದ್ದೇಶವನ್ನು ತಡೆಯಲಾಗಲ್ಲ ಎಂದಿದೆ. ಇದೇ ಸಮಯದಲ್ಲಿ ಸ್ವಯಂ ಆಡಳಿತದ ದ್ವೀಪರಾಷ್ಟ್ರ ತೀರದಲ್ಲಿ ಆರು ಚೀನೀ ನೌಕಾ ಹಡಗುಗಳು ಸುತ್ತುವರೆದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತೈವಾನ್ ಪ್ರತ್ಯೇಕತಾವಾದಿ ಪಡೆಗಳು ಸಾಮಾನ್ಯ ಜನರ ತೆರಿಗೆದಾರರ ಹಣವನ್ನು ಎಷ್ಟೇ ಖರ್ಚು ಮಾಡಿದರೂ, ಎಷ್ಟೇ ಅಮೆರಿಕದ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಂಡರೂ, ಅದು ತೈವಾನ್ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ. ದ್ವೀಪರಾಷ್ಟ್ರವನ್ನು ಚೀನಾದಲ್ಲಿ ವಿಲೀನ ಮಾಡುವ ದೃಢ ಸಂಕಲ್ಪವನ್ನು ಇದರಿಂದ ಅಲುಗಾಡಿಸುವುದು ಸಾಧ್ಯವಿಲ್ಲ ಎಂದು ಚೀನಾ ಬೊಬ್ಬಿರಿದಿದೆ.
ತೈವಾನ್ ಅನ್ನು ಅಮೆರಿಕ ಯುದ್ಧಕೇಂದ್ರಿತ ಶಸ್ತ್ರಾಸ್ತ್ರಗಳ ಡಿಪೋ ಆಗಿ ಪರಿವರ್ತಿಸುತ್ತಿದೆ. ಮಿಲಿಟರಿ ಆರ್ಥಿಕ ನೆರವು ನೀಡುವ ಮೂಲಕ ದೇಶವನ್ನು ತನ್ನ ವಿರುದ್ಧ ಎತ್ತಿ ಕಟ್ಟುತ್ತಿದೆ. ಈ ಎಲ್ಲಾ ಕ್ರಮಗಳನ್ನು ಚೀನಾ ತಡೆಯುವ ಸಾಮರ್ಥ್ಯ ಹೊಂದಿದೆ. ಇದು ತೈವಾನ್ ಜಲಸಂಧಿಯಲ್ಲಿ ಯುದ್ಧ ಭೀತಿಯನ್ನು ಉಲ್ಬಣಗೊಳಿಸುತ್ತದೆ ಅಷ್ಟೆ ಎಂದು ಚೀನಾ ಹೇಳಿಕೆ ತಿಳಿಸಿದೆ.