ಕರ್ನಾಟಕ

karnataka

ETV Bharat / international

ಮೊದಲ ಸಲ ಕೋವಿಡ್​ ಲೆಕ್ಕ ಕೊಟ್ಟ ಚೀನಾ: 35 ದಿನದಲ್ಲಿ 60 ಸಾವಿರ ಮಂದಿ ಬಲಿ!

ಕೊರೊನಾ ಜನಕ ಎಂಬ ಗಂಭೀರ ಆಪಾದನೆ ಹೊತ್ತಿರುವ ಚೀನಾ ಇದೇ ಮೊದಲ ಬಾರಿಗೆ ಅಧಿಕೃತ ಕೋವಿಡ್​ ಲೆಕ್ಕ ನೀಡಿದೆ. ದೇಶದಲ್ಲಿ ಕೋವಿಡ್​ಗೆ 60 ಸಾವಿರ ಜನರು ಸಾವನ್ನಪ್ಪಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.

By

Published : Jan 15, 2023, 8:08 AM IST

China COVID reports
ಮೊದಲ ಸಲ ಕೋವಿಡ್​ ಲೆಕ್ಕ ಕೊಟ್ಟ ಚೀನಾ

ಬೀಜಿಂಗ್:ಕೊರೊನಾ ಮೂಲಕ ಜಗತ್ತಿನೆಲ್ಲೆಡೆ ಕರುಣಾಜನಕ ಪರಿಸ್ಥಿತಿ ಸೃಷ್ಟಿಸಿದ ಆರೋಪ ಹೊತ್ತಿರುವ ಚೀನಾ ದೇಶ ಈ ಬಗ್ಗೆ ಶೂನ್ಯ ಅಸಹಿಷ್ಣುತೆ ಹೊಂದಿದ್ದು, ಈವರೆಗೂ ಎಷ್ಟು ಜನರಿಗೆ ಸೋಂಕು ತಗುಲಿದೆ ಮತ್ತು ಎಷ್ಟು ಸಾವು ಸಂಭವಿಸಿವೆ ಎಂಬ ಬಗ್ಗೆ ನಿಖರ ಮಾಹಿತಿ ಹಂಚಿಕೊಂಡಿರಲಿಲ್ಲ. ಇದು ವಿಶ್ವ ಸಮುದಾಯದ ಅಸಮಾಧಾನಕ್ಕೆ ಕಾರಣವಾಗಿತ್ತು. ಆದರೆ, ತೀವ್ರ ಜಾಗತಿಕ ಒತ್ತಡದ ಬಳಿಕ ಇದೇ ಮೊದಲ ಬಾರಿಗೆ ಡ್ರ್ಯಾಗನ್​ ರಾಷ್ಟ್ರ ಇತ್ತೀಚಿನ ಕೋವಿಡ್​ ಲೆಕ್ಕ ಕೊಟ್ಟಿದೆ. ಇದು ಅಚ್ಚರಿಯ ಜೊತೆಗೆ ಆತಂಕಕ್ಕೆ ಕಾರಣವಾಗಿದೆ.

ಚೀನಾ ಕೋವಿಡ್‌ ಸಾವುನೋವು: ಹೊಸ ಕೊರೊನಾ ಅಲೆಯಿಂದಾಗಿ ಡಿಸೆಂಬರ್​ ಆರಂಭದ ವಾರದಿಂದ ಈವರೆಗೂ ಅಂದರೆ 35 ದಿನಗಳಲ್ಲಿ 59,938 ಸಾವಿರ ಮಂದಿ ಸಾವನ್ನಪ್ಪಿದ್ದಾರೆ ಎಂದು ಕ್ಸಿ ಜಿನ್​ಪಿಂಗ್​ ಸರ್ಕಾರ ದಾಖಲೆ ಬಿಡುಗಡೆ ಮಾಡಿದೆ. ಇದರಲ್ಲಿ ಹೆಚ್ಚಿನವರು 80 ವರ್ಷದ ಮೇಲ್ಪಟ್ಟವರೇ ಎಂದು ತಿಳಿಸಿದೆ. ಇದು ದೇಶವಲ್ಲದೇ ಜಾಗತಿಕವಾಗಿಯೂ ತಲ್ಲಣ ಉಂಟುೠಡಿದೆ.

ಡಿಸೆಂಬರ್​ 8ರಿಂದ ಜನವರಿ 12ರ ನಡುವೆ ಹೆಚ್ಚೂ ಕಡಿಮೆ 60 ಸಾವಿರ ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ಉಸಿರಾಟದಿಂದ 5,503 ಮಂದಿ ಪ್ರಾಣ ಕಳೆದುಕೊಂಡರೆ, 54,435 ಜನರು ಹೃದಯ ಸಂಬಂಧಿ, ಸಕ್ಕರೆ ಕಾಯಿಲೆ ಸೇರಿದಂತೆ ವಿವಿಧ ಕಾರಣಕ್ಕಾಗಿ ಕೊರೊನಾಗೆ ಬಲಿಯಾಗಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಹೇಳಿದೆ. ಇದೆಲ್ಲವೂ ಆಸ್ಪತ್ರೆಯಲ್ಲಿ ಸಂಭವಿಸಿದ ದಾಖಲೆಗಳಾಗಿದ್ದು, ಮನೆಗಳಲ್ಲಿ ಮರಣ ಹೊಂದಿದ್ದರ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಅಲ್ಲದೇ, ಎಷ್ಟು ಜನರು ಈ ಅವಧಿಯಲ್ಲಿ ಸೋಂಕಿತರಾಗಿದ್ದಾರೆ ಎಂಬುದನ್ನೂ ತಿಳಿಸಿಲ್ಲ.

ಎರಡೂವರೆ ವರ್ಷಗಳ ಹಿಂದೆ ವುಹಾನ್​ನಲ್ಲಿ ಮೊದಲ ಬಾರಿಗೆ ಕೋವಿಡ್​ ಕಾಣಿಸಿಕೊಂಡ ಬಳಿಕ ಯಾವುದೇ ಕೋವಿಡ್​ ಲೆಕ್ಕಗಳನ್ನು ಚೀನಾ ನೀಡಿರಲಿಲ್ಲ. ಶೂನ್ಯ ನೀತಿ ಅನುಸರಿಸುತ್ತಿದ್ದ ನೆರೆರಾಷ್ಟ್ರ 5 ಸಾವಿರ ಜನರಷ್ಟೇ ಸಾವನ್ನಪ್ಪಿದ್ದಾರೆ ಎಂದು ಹೇಳಿಕೊಳ್ಳುತ್ತಾ ಬಂದಿತ್ತು. ಇದೀಗ ರಾಷ್ಟ್ರೀಯ ಆರೋಗ್ಯ ಆಯೋಗ ನೀಡಿದ ಮಾಹಿತಿ ದಂಗು ಬಡಿಸಿದೆ. ಆದರೂ, ಈ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ತಜ್ಞರು ಇದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಸಾವಾಗಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ವಿಶ್ವದಲ್ಲೇ ಅತಿ ಕಡಿಮೆ ಲೆಕ್ಕ ಕೊಟ್ಟ ಚೀನಾ:ವಿಶ್ವದಲ್ಲಿ ಮಹಾಮಾರಿ ತಾಂಡವವಾಡುತ್ತಿದ್ದರೆ ಚೀನಾ ಮಾತ್ರ ಯಾವುದೇ ಅಂಕಿಅಂಶ ನೀಡದೇ ಈ ಬಗ್ಗೆ ಮಾಹಿತಿ ಸೋರಿಕೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತ್ತು. 5 ಸಾವಿರ ಜನರು ಮಾತ್ರ ಕೋವಿಡ್​ಗೆ ಬಲಿಯಾಗಿದ್ದಾರೆ ಎಂದು ಹೇಳಿ ಚೀನಾ ವಿಶ್ವ ಸಮುದಾಯದ ಟೀಕೆಯಿಂದ ಜಾರಿಕೊಂಡಿತ್ತು. ಆದರೆ, ಅಲ್ಲಿನ ಅಸಲಿಯತ್ತೇ ಬೇರೆಯಾಗಿತ್ತು. ಇತ್ತೀಚೆಗೆ ಹೊಸ ಕೊರೊನಾ ರೂಪಾಂತರಿ ಇನ್ನಿಲ್ಲದಂತೆ ಕಾಡಿತ್ತು. ಸರ್ಕಾರ ಹಲವು ನಗರಗಳಲ್ಲಿ ಲಾಕ್​ಡೌನ್​ ಹೇರಿತ್ತು.

ಜನರು ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಎಡತಾಕಿ, ಎಲ್ಲೆಂದರಲ್ಲಿ ಮಲಗುತ್ತಿದ್ದ ಅಸಹನೀಯ ಕೆಲ ದೃಶ್ಯಗಳು ಹೊರಬಂದಿದ್ದವು. ಸರ್ಕಾರದ ಕಟ್ಟುನಿಟ್ಟಿನ ಕ್ರಮದಿಂದಾಗಿ ಆಹಾರ ಕೊರತೆ ಉಂಟಾಗಿ ಜನರು ಬೀದಿಗೆ ಬಂದು ಹೋರಾಟ ನಡೆಸಿದ್ದರು. ಬೀಜಿಂಗ್ ಮತ್ತು ದೇಶಾದ್ಯಂತದ ಆಸ್ಪತ್ರೆಗಳು ರೋಗಿಗಳಿಂದ ತುಂಬಿಹೋಗಿ, ಅಂತ್ಯಕ್ರಿಯೆಗೆ ಸ್ಮಶಾನಗಳು ಭರ್ತಿಯಾಗಿ ಹೆಣಗಾಡುತ್ತಿರುವುದು ಕಂಡುಬಂದಿತ್ತು.

ಇದನ್ನೂ ಓದಿ:ಪ್ರಪಂಚದ ಈ ದೇಶಗಳಲ್ಲಿ ಕೊರೊನಾ ಸಾವಿನಲ್ಲಿ ಹೆಚ್ಚಳ: ಈ ವಯೋಮಾನದವರಲ್ಲೇ ಕೋವಿಡ್​ ಅಬ್ಬರ ಹೆಚ್ಚು!

ABOUT THE AUTHOR

...view details