ಬೀಜಿಂಗ್(ಚೀನಾ) :ತೈವಾನ್ ವಿಚಾರದಲ್ಲಿ ಕಠಿಣ ನಿಲುವು ತಳೆದಿರುವ ಡ್ರ್ಯಾಗನ್ ರಾಷ್ಟ್ರ ಚೀನಾ, ಅಮೆರಿಕಕ್ಕೆ ಮೊನ್ನೆಯಷ್ಟೇ ಖಡಕ್ ಸಂದೇಶ ರವಾನಿಸಿದ ಬೆನ್ನಲ್ಲೇ ಇಂದು (ಶನಿವಾರ) ಯುದ್ಧಾಭ್ಯಾಸ ಶುರು ಮಾಡಿದೆ. ವಾಯು ಮತ್ತು ನೌಕಾ ದಳಗಳು ಜಂಟಿಯಾಗಿ ಅಭ್ಯಾಸ ನಡೆಸುತ್ತಿದ್ದು, ದ್ವೀಪರಾಷ್ಟ್ರದ ಮೇಲೆ ಆಕ್ರಮಣದ ಸನ್ನದ್ಧತೆ ಎಂದು ಬಿಂಬಿಸಲಾಗಿದೆ. ಸಾರ್ವಭೌಮ ಬಯಸುತ್ತಿರುವ ತೈವಾನ್ಗೆ ಇದು ಎಚ್ಚರಿಕೆಯ ಕರೆಗಂಟೆಯಾಗಿದೆ.
ಇತ್ತೀಚೆಗೆ ತೈವಾನ್ ಉಪಾಧ್ಯಕ್ಷ ವಿಲಿಯಂ ಲೈ ಅವರು ಅಮೆರಿಕ ಪ್ರವಾಸದಲ್ಲಿ ದೇಶದ ಮೇಲಿನ ಆಕ್ರಮಣವನ್ನು ಖಂಡಿಸಿದ್ದರು. ಇದಕ್ಕೆ ಅಷ್ಟೇ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದ ಚೀನಾ, ತೈವಾನ್ ವಿಚಾರದಲ್ಲಿ ಯಾವುದೇ ರಾಷ್ಟ್ರಗಳು ಮೂಗು ತೂರಿಸಿದರೆ, ಪರಿಣಾಮ ಭೀಕರವಾಗಿರುತ್ತದೆ. ಬೆಂಕಿಯೊಂದಿಗೆ ಸರಸ ಬೇಡ ಎಂದು ನೇರವಾಗಿ ಅಮೆರಿಕಕ್ಕೆ ಸಂದೇಶ ರವಾನಿಸಿತ್ತು. ಇದರ ಬೆನ್ನಲ್ಲೇ ಈಗ ಯುದ್ಧಾಭ್ಯಾಸಕ್ಕೆ ಅಣಿಯಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ ಕಮಾಂಡ್‌ವೊಂದರ ವಕ್ತಾರರು, ಚೀನಾದ ಪಡೆಗಳು ಗಾಳಿ, ವಾಯುವಿನಲ್ಲಿ ಹಾರಾಟ ನಡೆಸಿ ಯಾವುದೇ ಪ್ರದೇಶವನ್ನು ವಶಪಡಿಸಿಕೊಳ್ಳುವ ಸಾಮರ್ಥ್ಯ ಹೊಂದಿವೆ. ಹಡಗುಗಳು, ವಿಮಾನಗಳು ಅಭ್ಯಾಸದಲ್ಲಿ ತೊಡಗಿವೆ. ನೈಜ ಯುದ್ಧ ಪರಿಸ್ಥಿತಿಗಳಲ್ಲಿ ಹೋರಾಡುವ ಸಶಸ್ತ್ರ ಪಡೆಗಳ ಸಾಮರ್ಥ್ಯವನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಹೇಳಿದರು.
ಚೀನಾದ ಮಾಧ್ಯಮಗಳ ಪ್ರಕಾರ, ತೈವಾನ್ ವಿಚಾರದಲ್ಲಿ ವಿದೇಶಿ ಶಕ್ತಿಗಳು ಪ್ರಚೋದನೆ ನೀಡುತ್ತಿವೆ. ಇದು ರಾಷ್ಟ್ರಗಳ ನಡುವಿನ ಸಮಸ್ಯೆ. ಇದರಲ್ಲಿ ಮಧ್ಯಪ್ರವೇಶ ಸಲ್ಲದು ಎಂದು ಸರ್ಕಾರ ಹೇಳಿದೆ.