ಲಂಡನ್: ಭಾರತವು ಜಾಗತಿಕ ಶಕ್ತಿಯಾಗಿ ಪರಿವರ್ತನೆಯಾಗಿರುವ ಮಧ್ಯೆ ಭಾರತದ ಬಗ್ಗೆ ಚೀನಾದ ದೃಷ್ಟಿಕೋನದಲ್ಲಿ ವ್ಯಾಪಕ ಬದಲಾವಣೆ ಕಂಡು ಬಂದಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ಹೇಳಿದ್ದಾರೆ. ಚೀನಾದ ಸರ್ಕಾರಿ ಒಡೆತನದ ಮಾಧ್ಯಮ ಗ್ಲೋಬಲ್ ಟೈಮ್ಸ್ನಲ್ಲಿ ಪ್ರಕಟವಾದ ವರದಿಯನ್ನು ಉಲ್ಲೇಖಿಸಿ ಸಚಿವರು ಈ ಮಾತು ಹೇಳಿದ್ದಾರೆ.
"ಒಂದು ರೀತಿಯಲ್ಲಿ ಚೀನಾದ ಮುಖವಾಣಿ ಆಗಿರುವ ಗ್ಲೋಬಲ್ ಟೈಮ್ಸ್ನಲ್ಲಿ ಅಂಕಣಕಾರರೊಬ್ಬರು 'ಇಂಡಿಯಾದಲ್ಲಿ ಭಾರತದ ನಿರೂಪಣೆ' ಶೀರ್ಷಿಕೆಯಡಿ ಲೇಖನವನ್ನು ಪ್ರಕಟಿಸಿದ್ದಾರೆ. ಈ ಲೇಖನವು ಭಾರತದ ಬಗ್ಗೆ ಬದಲಾಗುತ್ತಿರುವ ಚೀನಾದ ದೃಷ್ಟಿಕೋನಕ್ಕೆ ಸಾಕ್ಷಿಯಾಗಿದೆ. ನಮ್ಮ ಆರ್ಥಿಕ ಮತ್ತು ವಿದೇಶಾಂಗ ನೀತಿಗಳು ಮತ್ತು ನಮ್ಮ ಬದಲಾಗುತ್ತಿರುವ ಕಾರ್ಯತಂತ್ರದ ಹಿತಾಸಕ್ತಿಗಳು ಭಾರತವು ಪ್ರಮುಖ ಜಾಗತಿಕ ಆರ್ಥಿಕ ಮತ್ತು ಕಾರ್ಯತಂತ್ರದ ಶಕ್ತಿಯಾಗಿ ಹೊರಹೊಮ್ಮಿದೆ ಎಂಬುದನ್ನು ಚೀನಾ ಸರ್ಕಾರ ಒಪ್ಪಿಕೊಂಡಿದೆ ಎಂದು ತೋರುತ್ತದೆ" ಎಂದು ಸಿಂಗ್ ತಿಳಿಸಿದರು.
"ನಾವು ಯಾರನ್ನೂ ನಮ್ಮ ಶತ್ರುಗಳಾಗಿ ಪರಿಗಣಿಸುವುದಿಲ್ಲ. ಆದರೆ, ಭಾರತ ಮತ್ತು ಚೀನಾ ನಡುವಿನ ಸಂಬಂಧವು ಪ್ರಸ್ತುತ ಒತ್ತಡದಲ್ಲಿದೆ ಎಂಬುದು ಜಗತ್ತಿಗೆ ತಿಳಿದಿದೆ. ಆದಾಗ್ಯೂ, ನಮ್ಮ ಎಲ್ಲ ನೆರೆಹೊರೆಯವರು ಮತ್ತು ಪ್ರಪಂಚದಾದ್ಯಂತದ ಎಲ್ಲ ದೇಶಗಳೊಂದಿಗೆ ಉತ್ತಮ ಸಂಬಂಧ ಬೆಳೆಸಲು ನಾವು ಬಯಸುತ್ತೇವೆ" ಎಂದು ಸಿಂಗ್ ಜನವರಿ 11 ರಂದು ಲಂಡನ್ನಲ್ಲಿ ಹೇಳಿದರು.