ಬೀಜಿಂಗ್: ಇದೇ ವಾರ ತೈವಾನ್‌ಗೆ ಭೇಟಿ ನೀಡಿದ್ದ ಅಮೆರಿಕ ಜನಪ್ರತಿನಿಧಿ ಸಭೆಯ ಸ್ಪೀಕರ್ ನ್ಯಾನ್ಸಿ ಪೆಲೋಸಿ ವಿರುದ್ಧ ಚೀನಾದ ವಿದೇಶಾಂಗ ಸಚಿವಾಲಯವು ಶುಕ್ರವಾರ ಹಲವಾರು ನಿರ್ಬಂಧಗಳನ್ನು ಘೋಷಿಸಿದೆ. ಪೆಲೋಸಿ ಅವರ ತೈವಾನ್ ಭೇಟಿಯಿಂದ ಚೀನಾ ಕೆರಳಿ ಕೆಂಡವಾಗಿದ್ದು, ತೈವಾನ್ ಸುತ್ತಮತ್ತ ಮಿಲಿಟರಿ ಡ್ರಿಲ್ ಕೂಡ ನಡೆಸಿದೆ.
"ಪೆಲೋಸಿ ಅವರು ಚೀನಾದ ಆಂತರಿಕ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸುತ್ತಿದ್ದಾರೆ ಮತ್ತು ಚೀನಾದ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆಯನ್ನು ಹಾಳು ಮಾಡುತ್ತಿದ್ದಾರೆ. ಬೀಜಿಂಗ್, ಪೆಲೋಸಿ ಮತ್ತು ಅವರ ಹತ್ತಿರದ ಕುಟುಂಬದ ಮೇಲೆ ನಿರ್ಬಂಧಗಳನ್ನು ವಿಧಿಸುತ್ತದೆ" ಎಂದು ಚೀನಾ ವಿದೇಶಾಂಗ ಸಚಿವಾಲಯ ಹೇಳಿದೆ. ತನ್ನ ಪ್ರಮುಖ ಹಿತಾಸಕ್ತಿಗಳಿಗೆ ವಿರುದ್ಧವಾಗಿ ವರ್ತಿಸಿದ ಮತ್ತು ಹಾಂಗ್ ಕಾಂಗ್, ಕ್ಸಿನ್‌ಜಿಯಾಂಗ್‌ನ ವಾಯುವ್ಯ ಪ್ರದೇಶದಲ್ಲಿನ ಮಾನವ ಹಕ್ಕುಗಳ ವಿಷಯಗಳ ಬಗ್ಗೆ ಮಾತನಾಡಿದ್ದಕ್ಕಾಗಿ ಚೀನಾ ಇತ್ತೀಚಿನ ವರ್ಷಗಳಲ್ಲಿ ಹಲವಾರು ಅಮೆರಿಕದ ಅಧಿಕಾರಿಗಳ ಮೇಲೆ ನಿರ್ಬಂಧಗಳನ್ನು ಹೇರಿದೆ.