ನವದೆಹಲಿ:2023ರ ಮೊದಲ ಐದು ತಿಂಗಳಲ್ಲಿ ಚೀನಾಕ್ಕೆ ಪ್ರಯಾಣಿಸುವ ಭಾರತೀಯರಿಗೆ ಚೀನಾದ ರಾಯಭಾರ ಕಚೇರಿ ಮತ್ತು ಕಾನ್ಸುಲೇಟ್ ಜನರಲ್ 60,000ಕ್ಕೂ ಹೆಚ್ಚು ವೀಸಾಗಳನ್ನು ನೀಡಿದೆ ಎಂದು ಭಾರತದಲ್ಲಿನ ಚೀನಾ ರಾಯಭಾರ ಕಚೇರಿಯ ವಕ್ತಾರ ವಾಂಗ್ ಕ್ಸಿಯಾಜಿಯಾನ್ ಮಂಗಳವಾರ ತಿಳಿಸಿದ್ದಾರೆ.
ಚೀನಾದ ವಕ್ತಾರ ಮಾಡಿದ ಟ್ವೀಟ್ನಲ್ಲೇನಿದೆ?:ಈ ಕುರಿತು ಟ್ವೀಟ್ ಮಾಡಿದ ಚೀನಾದ ವಕ್ತಾರ, ''ಈ ವರ್ಷದ ಮೊದಲ 5 ತಿಂಗಳಲ್ಲಿ, ಚೀನಾ ರಾಯಭಾರ ಕಚೇರಿ ಮತ್ತು ಕಾನ್ಸುಲೇಟ್ ಜನರಲ್, ವ್ಯಾಪಾರ, ಅಧ್ಯಯನ, ಪ್ರವಾಸಿ, ಕೆಲಸ, ಕುಟುಂಬ ಪುನರ್ಮಿಲನ ಸೇರಿದಂತೆ ಇತರ ಉದ್ದೇಶಗಳಿಗಾಗಿ ಚೀನಾಕ್ಕೆ ಪ್ರಯಾಣಿಸುವ ಭಾರತೀಯರಿಗೆ 60,000 ವೀಸಾಗಳನ್ನು ನೀಡಿದೆ. ಚೀನಾಕ್ಕೆ ಸ್ವಾಗತ" ಎಂದು ಬರೆದಿದ್ದಾರೆ.
ಅಧಿಸೂಚನೆಯಲ್ಲಿ ಏನಿದೆ?: ಪ್ರವಾಸೋದ್ಯಮ, ವ್ಯಾಪಾರ ಅಧ್ಯಯನ, ಕೆಲಸ ಮತ್ತು ಕುಟುಂಬ ಪುನರ್ಮಿಲನ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ಭಾರತೀಯ ಪ್ರಜೆಗಳಿಗೆ ವೀಸಾಗಳನ್ನು ಕೊಡಲಾಗಿದೆ. ಮೂಲಗಳ ಪ್ರಕಾರ, ಈ ವರ್ಷದ ಮಾರ್ಚ್‌ನಲ್ಲಿ ಅಂದ್ರೆ, ಮೂರು ವರ್ಷಗಳಲ್ಲಿ ಮೊದಲ ಬಾರಿಗೆ ಭಾರತ ಸೇರಿದಂತೆ ವಿದೇಶಿ ಪ್ರವಾಸಿಗರು ದೇಶಕ್ಕೆ ಪ್ರವೇಶಿಸಲಿದ್ದಾರೆ ಎಂದು ಚೀನಾ ಘೋಷಿಸಿದೆ. ಮಾರ್ಚ್ 14ರಂದು ಹೊರಡಿಸಲಾದ ಅಧಿಸೂಚನೆಯಲ್ಲಿ, ಭಾರತದಲ್ಲಿನ ಚೀನಾ ರಾಯಭಾರ ಕಚೇರಿ ಮತ್ತು ಕಾನ್ಸುಲೇಟ್ ಜನರಲ್ ವಿವಿಧ ರೀತಿಯ ಚೀನಾ ವೀಸಾಗಳನ್ನು ನೀಡುವುದನ್ನು ಪುನರಾರಂಭಿಸುವುದಾಗಿ ಹೇಳಿದೆ. ಅಧಿಸೂಚನೆಯಲ್ಲಿ, ಭಾರತದಲ್ಲಿನ ಚೀನಾ ರಾಯಭಾರ ಕಚೇರಿಯು, "ಮಾರ್ಚ್ 28, 2020ರ ಮೊದಲು ನೀಡಲಾದ ಮತ್ತು ಮಾನ್ಯವಾಗಿರುವ ಚೀನಾ ವೀಸಾಗಳನ್ನು ಪುನಃ ಸಕ್ರಿಯಗೊಳಿಸಲಾಗುತ್ತದೆ" ಎಂದು ಚೀನಾ ಹೇಳಿದೆ.