ಕರ್ನಾಟಕ

karnataka

ETV Bharat / international

ಮಸೀದಿಗಳನ್ನು ಮುಚ್ಚಿಸುವ ಕಾರ್ಯಾಚರಣೆ ವಿಸ್ತರಿಸಿದ ಚೀನಾ; ಹ್ಯೂಮನ್ ರೈಟ್ಸ್ ವಾಚ್ ವರದಿ - ಮುಸ್ಲಿಮರು ವಾಸಿಸುವ ಉತ್ತರ ನಿಂಗ್ಸಿಯಾ

ಕ್ಸಿನ್ಜಿಯಾಂಗ್ ಮಾತ್ರವಲ್ಲದೇ ದೇಶದ ಹಲವಾರು ಭಾಗಗಳಲ್ಲಿನ ಮಸೀದಿಗಳನ್ನು ಚೀನಾ ಸರ್ಕಾರ ಮುಚ್ಚಿಸುತ್ತಿದೆ ಎಂದು ಹ್ಯೂಮನ್ ರೈಟ್ಸ್ ವಾಚ್ ವರದಿ ತಿಳಿಸಿದೆ.

China is expanding its crackdown on mosques
China is expanding its crackdown on mosques

By PTI

Published : Nov 22, 2023, 5:00 PM IST

ಹಾಂಕಾಂಗ್ : ಮಸೀದಿಗಳನ್ನು ಮುಚ್ಚಿಸುವ ಕಾರ್ಯಾಚರಣೆಯನ್ನು ಕ್ಸಿನ್ಜಿಯಾಂಗ್ ಮಾತ್ರವಲ್ಲದೇ ಇತರ ಪ್ರದೇಶಗಳಿಗೂ ಚೀನಾ ವಿಸ್ತರಿಸಿದೆ ಎಂದು ಎಂದು ಹ್ಯೂಮನ್ ರೈಟ್ಸ್ ವಾಚ್ ವರದಿ ತಿಳಿಸಿದೆ. ಕ್ಸಿನ್ಜಿಯಾಂಗ್​ನಲ್ಲಿನ ಅಲ್ಪಸಂಖ್ಯಾತ ಮುಸ್ಲಿಮರ ವಿರುದ್ಧ ಚೀನಾ ದೌರ್ಜನ್ಯವೆಸಗುತ್ತಿದೆ ಎಂಬ ಆರೋಪಗಳು ಕಳೆದ ಹಲವಾರು ವರ್ಷಗಳಿಂದ ಕೇಳಿ ಬರುತ್ತಿವೆ.

ವರದಿಯ ಪ್ರಕಾರ, ಈ ಪ್ರಕ್ರಿಯೆಗೆ ಅಧಿಕೃತವಾಗಿ 'ಬಲವರ್ಧನೆ' ಎಂದು ಹೆಸರಿಸಿರುವ ಸರ್ಕಾರ ಇದರ ಭಾಗವಾಗಿ ಹೆಚ್ಚಿನ ಸಂಖ್ಯೆಯ ಹುಯಿ ಸಮುದಾಯದ ಮುಸ್ಲಿಮರು ವಾಸಿಸುವ ಉತ್ತರ ನಿಂಗ್ಸಿಯಾ ಪ್ರದೇಶ ಮತ್ತು ಗನ್ಸು ಪ್ರಾಂತ್ಯದ ಮಸೀದಿಗಳನ್ನು ಅಧಿಕಾರಿಗಳು ಮುಚ್ಚಿದ್ದಾರೆ. ಈ ಕಾರ್ಯಾಚರಣೆಯ ಭಾಗವಾಗಿ ಸಾರ್ವಜನಿಕ ದಾಖಲೆಗಳು, ಉಪಗ್ರಹ ಚಿತ್ರಗಳು ಮತ್ತು ಸಾಕ್ಷಿಗಳ ಸಾಕ್ಷ್ಯಗಳನ್ನು ಕೂಡ ಬದಲಾಯಿಸಲಾಗುತ್ತಿದೆ.

ಸ್ಥಳೀಯ ಅಧಿಕಾರಿಗಳು ಮಸೀದಿಗಳನ್ನು ಹೆಚ್ಚು ಚೀನೀ ಕಟ್ಟಡಗಳಂತೆ ಕಾಣುವಂತೆ ಮಾಡಲು ಅವುಗಳ ವಾಸ್ತುಶಿಲ್ಪದ ವೈಶಿಷ್ಟ್ಯಗಳನ್ನು ಕೂಡ ಮಾರ್ಪಡಿಸುತ್ತಿದ್ದಾರೆ. ಇದು ಧರ್ಮದ ಮೇಲೆ ನಿಯಂತ್ರಣವನ್ನು ಬಿಗಿಗೊಳಿಸುವ ಮತ್ತು ತನ್ನ ಆಡಳಿತಕ್ಕೆ ಸಂಭಾವ್ಯ ಅಪಾಯವನ್ನು ಕಡಿಮೆ ಮಾಡುವ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ ಅಭಿಯಾನದ ಭಾಗವಾಗಿದೆ ಎಂದು ತಿಳಿದು ಬಂದಿದೆ.

ಅಧ್ಯಕ್ಷ ಕ್ಸಿ ಜಿನ್​ಪಿಂಗ್ 2016 ರಲ್ಲಿ ಧರ್ಮಗಳ ಸಿನೈಸೀಕರಣಕ್ಕೆ ಕರೆ ನೀಡಿದ್ದರು. ಇದು ಹೆಚ್ಚಾಗಿ 11 ದಶಲಕ್ಷಕ್ಕೂ ಹೆಚ್ಚು ಉಯಿಘುರ್ ಮುಸ್ಲಿಮರು ಮತ್ತು ಇತರ ಮುಸ್ಲಿಂ ಅಲ್ಪಸಂಖ್ಯಾತರಿಗೆ ನೆಲೆಯಾಗಿರುವ ಕ್ಸಿನ್ಜಿಯಾಂಗ್​ನ ಪಶ್ಚಿಮ ಪ್ರದೇಶದ ಮೇಲೆ ಹೆಚ್ಚಾಗಿ ಕೇಂದ್ರೀಕೃತವಾಗಿದೆ.

ಕಾನೂನು ಬಾಹಿರ ಬಂಧನ ಶಿಬಿರಗಳಲ್ಲಿ ಕನಿಷ್ಠ 1 ಮಿಲಿಯನ್ ಉಯಿಘುರ್ ಮುಸ್ಲಿಮರು, ಹುಯಿಗಳು, ಕಝಾಕ್​ಗಳು ಮತ್ತು ಕಿರ್ಗಿಜ್​ ಜನರನ್ನು ಚೀನಾ ಹಿಡಿದಿಟ್ಟಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಕಳೆದ ವರ್ಷದ ವಿಶ್ವಸಂಸ್ಥೆ ವರದಿಯು, ಚೀನಾ ಸರ್ಕಾರ ವ್ಯಾಪಕ ಪ್ರಮಾಣದಲ್ಲಿ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿದೆ ಎಂದು ಹೇಳಿದೆ.

ಹ್ಯೂಮನ್ ರೈಟ್ಸ್ ವಾಚ್ ಪ್ರಕಾರ, ಧಾರ್ಮಿಕ ಅಭಿವ್ಯಕ್ತಿಯನ್ನು ಹತ್ತಿಕ್ಕುವ ಉದ್ದೇಶದ ಅಭಿಯಾನದ ಭಾಗವಾಗಿ ಚೀನಾದ ಅಧಿಕಾರಿಗಳು ಕ್ಸಿನ್ಜಿಯಾಂಗ್ ಹೊರಗಿನ ಪ್ರದೇಶಗಳಲ್ಲಿ ಮಸೀದಿಗಳನ್ನು ಎಲ್ಲರೂ ಬಳಸುವಂತೆ ಮಾಡಲು ಅವುಗಳನ್ನು ತೆಗೆದುಹಾಕಿದ್ದಾರೆ, ಮುಚ್ಚಿದ್ದಾರೆ, ನೆಲಸಮಗೊಳಿಸಿದ್ದಾರೆ ಅಥವಾ ಪರಿವರ್ತಿಸಿದ್ದಾರೆ. ವರದಿಯ ಬಗ್ಗೆ ಮತ್ತು ಮುಸ್ಲಿಂ ಅಲ್ಪಸಂಖ್ಯಾತರ ಬಗ್ಗೆ ಅದರ ಅಧಿಕೃತ ನೀತಿಗಳ ಬಗ್ಗೆ ಪ್ರತಿಕ್ರಿಯೆ ಕೋರಿ ಫ್ಯಾಕ್ಸ್ ಮಾಡಿದ ಪ್ರಶ್ನೆಗಳಿಗೆ ಚೀನಾದ ವಿದೇಶಾಂಗ ಸಚಿವಾಲಯ ತಕ್ಷಣ ಉತ್ತರಿಸಲಿಲ್ಲ.

ಚೀನಾ ಸರ್ಕಾರ ತಾನು ಹೇಳಿಕೊಳ್ಳುವಂತೆ ಮಸೀದಿಗಳನ್ನು ಬಲಪಡಿಸುತ್ತಿಲ್ಲ, ಬದಲಾಗಿ ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸಿ ಅನೇಕ ಮಸೀದಿಗಳನ್ನು ಮುಚ್ಚುತ್ತಿದೆ ಎಂದು ಹ್ಯೂಮನ್ ರೈಟ್ಸ್ ವಾಚ್​ನ ಚೀನಾದ ಹಂಗಾಮಿ ನಿರ್ದೇಶಕಿ ಮಾಯಾ ವಾಂಗ್ ಹೇಳಿದ್ದಾರೆ. ಚೀನಾ ಸರ್ಕಾರವು ಮಸೀದಿಗಳನ್ನು ಮುಚ್ಚುವುದು, ನಾಶಪಡಿಸುವುದು ಮತ್ತು ಮರುಬಳಕೆ ಮಾಡುವುದು ಚೀನಾದಲ್ಲಿ ಇಸ್ಲಾಂ ಆಚರಣೆಯನ್ನು ನಿಗ್ರಹಿಸುವ ವ್ಯವಸ್ಥಿತ ಪ್ರಯತ್ನದ ಭಾಗವಾಗಿದೆ ಎಂದು ಆವರು ಆರೋಪಿಸಿದ್ದಾರೆ.

ಇದನ್ನೂ ಓದಿ : ಸಿನಾಯ್ ದ್ವೀಪಕ್ಕೆ ಪ್ಯಾಲೆಸ್ಟೈನಿಯರ ಸ್ಥಳಾಂತರಿಸಲು ಅವಕಾಶ ನೀಡಲ್ಲ; ಈಜಿಪ್ಟ್ ಪ್ರಧಾನಿ

ABOUT THE AUTHOR

...view details