ಬೀಜಿಂಗ್(ಚೀನಾ): ಮಾನವ ಹಕ್ಕುಗಳ ವಿಚಾರಕ್ಕೆ ಬರುವುದಾದರೆ ಚೀನಾದಲ್ಲಿ ಅತ್ಯಂತ ಕೆಟ್ಟ ಪರಿಸ್ಥಿತಿ ಇದೆ ಎಂಬುದು ಮಾನವ ಹಕ್ಕುಗಳ ಸಂಘಟನೆಗಳು ಹೇಳುವ ಮಾತು. ಆದರೆ, ಈಗ ಸ್ವತಃ ಚೀನಾ ಸ್ವೀಡನ್ಗೆ ಮಾನವ ಹಕ್ಕುಗಳ ಪಾಠ ಮಾಡಿದೆ. ಸ್ವೀಡನ್ನಲ್ಲಿರುವ ಮುಸ್ಲಿಮರ ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳ ಧಾರ್ಮಿಕ ನಂಬಿಕೆಗಳನ್ನು ಗೌರವಿಸಬೇಕು. ಅವರ ಕಾನೂನು ಬದ್ಧ ಹಕ್ಕುಗಳನ್ನು ರಕ್ಷಿಸಿಬೇಕು ಎಂದು ಚೀನಾ ಸ್ವೀಡನ್ಗೆ ಆಗ್ರಹಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಏಪ್ರಿಲ್ 15-16ರಂದು ಸ್ವೀಡನ್ನಲ್ಲಿ ಮುಸ್ಲಿಂ ವಿರೋಧಿ ಗಲಭೆಗಳು ನಡೆದಿವೆ ಎಂಬ ಹಿನ್ನೆಲೆಯಲ್ಲಿ ಏಪ್ರಿಲ್ 20ರಂದು ಪ್ರತಿಕ್ರಿಯೆ ನೀಡಿದ್ದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ 'ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತ ಗುಂಪುಗಳ ಧಾರ್ಮಿಕ ನಂಬಿಕೆಗಳನ್ನು ಶ್ರದ್ಧೆಯಿಂದ ಗೌರವಿಸಬೇಕು. ಅವರ ಧಾರ್ಮಿಕ ನಂಬಿಕೆಯ ಸ್ವಾತಂತ್ರ್ಯ ನೀಡಬೇಕು' ಎಂದು ಆಗ್ರಹಿಸಿದ್ದಾರೆ. ಈ ಕುರಿತು ಹಾಂಕಾಂಗ್ ಪೋಸ್ಟ್ ವರದಿ ಮಾಡಿದೆ.
ಚೀನಾ ಇಬ್ಬಗೆಯ ನೀತಿ:ಸ್ವೀಡನ್ನ ಮುಸ್ಲಿಮರ ಬಗ್ಗೆ ಮಾತನಾಡುವ ಚೀನಾ ತನ್ನ ದೇಶದ ಉಯ್ಘರ್ ಮುಸ್ಲಿಮರ ಮೇಲೆ ನೀಡುತ್ತಿರುವ ಕಿರುಕುಳ ಜಗತ್ತಿಗೆ ಗೊತ್ತಿದೆ. ಈ ಹಿನ್ನೆಲೆಯಲ್ಲಿ ಉಯ್ಘರ್ ಮುಸ್ಲಿಮರನ್ನು ಭೇಟಿಯಾಗುವ ಇಚ್ಚೆಯನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಮಿಚೆಲ್ ಬ್ಯಾಚೆಲೆಟ್ ವ್ಯಕ್ತಪಡಿಸಿದ್ದರು. ಆದರೆ, ಚೀನಾ ಮಿಚೆಲ್ ಬ್ಯಾಚೆಲೆಟ್ ಅವರ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಹೈಕಮಿಷನರ್ ಚೀನಾ ಭೇಟಿ ಕೇವಲ ಸಹಕಾರವನ್ನು ಉತ್ತೇಜಿಸುವುದಾಗಿರಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.