ಹೈದರಾಬಾದ್ ಡೆಸ್ಕ್:ಮತ್ತೊಬ್ಬ ಪಂಜಾಬಿ ಭಾರತ ತೊರೆದು ಬ್ರಿಟನ್ನಲ್ಲಿ ನೆಲೆಸಿ ಈಗ ಇತಿಹಾಸ ಸೃಷ್ಟಿಸಿದ್ದಾರೆ. ಹೌದು, ಹೋಶಿಯಾರ್ಪುರ್ ನಿವಾಸಿ ಚಮನ್ ಲಾಲ್ ಅವರು ಬರ್ಮಿಂಗ್ಹ್ಯಾಮ್ ನಗರದ ಮೊದಲ ಬ್ರಿಟಿಷ್-ಇಂಡಿಯನ್ ಲಾರ್ಡ್ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಕೆಲವು ದಿನಗಳ ಹಿಂದೆ ಭಾರತೀಯ ಮೂಲದ ಸಿಖ್ ಕೌನ್ಸಿಲರ್ ಜಸ್ವಂತ್ ಸಿಂಗ್ ಬರ್ಡಿ ಅವರು ಇಂಗ್ಲೆಂಡ್‌ನ ವೆಸ್ಟ್ ಮಿಡ್‌ಲ್ಯಾಂಡ್ಸ್‌ನಲ್ಲಿರುವ ಕೋವೆಂಟ್ರಿ ನಗರದ ನೂತನ ಲಾರ್ಡ್ ಮೇಯರ್ ಆಗಿ ಅಧಿಕಾರ ವಹಿಸಿಕೊಂಡಿದ್ದರು ಎಂಬುದು ಗಮನಾರ್ಹ.
1994ರಲ್ಲಿ ಚುನಾಯಿತ ಕೌನ್ಸಿಲರ್:ಸಿಖ್‌ರ ರವಿದಾಸ್ಸಿಯಾ ಸಮುದಾಯದಿಂದ ಬಂದ ಚಮನ್ ಲಾಲ್ ಬ್ರಿಟನ್‌ಗೆ ತೆರಳುವ ಮೊದಲು ಹೋಶಿಯಾರ್‌ಪುರದ ಪಖೋವಾಲ್ ಗ್ರಾಮದಲ್ಲಿ ಜನಿಸಿದ್ದರು. ಅವರು ಹಲವು ವರ್ಷಗಳ ಕಾಲ ಸ್ಥಳೀಯ ಕೌನ್ಸಿಲರ್ ಆಗಿ ಸೇವೆ ಸಲ್ಲಿಸಿದರು. ಲೇಬರ್ ಪಕ್ಷದ ರಾಜಕಾರಣಿಯಾಗಿ, ಅವರು ಮೊದಲ ಬಾರಿಗೆ 1994ರಲ್ಲಿ ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದರು. ಇತ್ತೀಚಿನ ಸ್ಥಳೀಯ ಚುನಾವಣೆಯಲ್ಲಿ ಸೊಹೊ ಮತ್ತು ಜ್ಯುವೆಲ್ಲರಿ ಕ್ವಾರ್ಟರ್ ವಾರ್ಡ್‌ಗಳಿಗೆ ಕೌನ್ಸಿಲರ್‌ಗಳಾಗಿ ಕೂಡಾ ಮರು ಆಯ್ಕೆಯಾಗಿದ್ದರು.
ನಾನು ಲಾರ್ಡ್ ಮೇಯರ್ ಆಗುತ್ತೇನೆಂದು ಭಾವಿಸಿರಲಿಲ್ಲ:ಕಳೆದ ವಾರ ನಡೆದ ಕಾರ್ಯಕ್ರಮವೊಂದರಲ್ಲಿ ಚಮನ್ ಲಾಲ್ ಅವರು ತಮ್ಮ ಭಾಷಣದಲ್ಲಿ ಈ ರೀತಿ ಹೇಳಿದ್ದರು. ''ಭಾರತೀಯ ಮೂಲದ ಸೇನಾಧಿಕಾರಿಯ ಮಗನಾದ ನನಗೆ ಮತ್ತು ನಮ್ಮ ಕುಟುಂಬಕ್ಕೆ ಲಾರ್ಡ್ ಮೇಯರ್ ಆಗಿ ಆಯ್ಕೆಯಾಗಿರುವುದು ದೊಡ್ಡ ಗೌರವವಾಗಿದೆ. ನಾನು ಈ ನಗರವನ್ನು ದತ್ತು ಪಡೆದಿದ್ದೇನೆ. ಒಂದು ದಿನ ನಾನು ಈ ನಗರದ ಲಾರ್ಡ್ ಮೇಯರ್ ಆಗುತ್ತೇನೆಂದು ಎಂದಿಗೂ ಯೋಚಿಸಿರಲಿಲ್ಲ '' ಎಂದು ಅವರು ತಿಳಿಸಿದ್ದರು.