ಜರ್ಮನಿ: ಯೂರೋಪ್‌ನ ದೇಶ ಜರ್ಮನಿಯಲ್ಲಿರುವ ಬ್ರಾ-ವೊ ಕನ್ನಡಿಗರ ಬಳಗವು ಮುಂಬರುವ ಕರ್ನಾಟಕ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಯೋಜನೆ ಹಾಕಿಕೊಂಡಿದೆ. ಕಾರ್ಯಕ್ರಮಗಳ ತಯಾರಿ ಮತ್ತು ಪೂರ್ವಸಿದ್ಧತೆಗಳು ಭರದಿಂದ ಸಾಗಿವೆ. 100ಕ್ಕೂ ಹೆಚ್ಚು ಕುಟುಂಬಗಳು ಕನ್ನಡ ಬಳಗದ ಸದಸ್ಯರ ಪಟ್ಟಿಯಲ್ಲಿವೆ. ಕಳೆದ ನಾಲ್ಕು ವರ್ಷಗಳಿಂದ ಅರ್ಥಗರ್ಭಿತ, ವಿಜ್ರಂಭಣೆಯ ಕನ್ನಡ ರಾಜ್ಯೋತ್ಸವವನ್ನು ಈ ಬಳಗ ಆಚರಿಸಿಕೊಂಡು ಬರುತ್ತಿದೆ.
ಕರ್ನಾಟಕ ಹಾಗೂ ಕನ್ನಡ ಭಾಷೆಮಯ ಕುರಿತು ಅಪಾರ ಒಲವು ಹೊಂದಿರುವ ಜತೆಗೆ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳ ಕುರಿತೂ ಅರಿತುಕೊಂಡಿರುವ ಬ್ರಾ-ವೊ ಕನ್ನಡ ಬಳಗ, ಪ್ರತಿವರ್ಷ ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ರಾಜ್ಯೋತ್ಸವವನ್ನು ಅಚ್ಚುಕಟ್ಟಾಗಿ ಆಚರಿಸುತ್ತಿದೆ. ಭಾವಗೀತೆ, ನೃತ್ಯ, ಏಕಪಾತ್ರಾಭಿನಯ, ನಾಟಕ ಸೇರಿದಂತೆ ಕಲೆ ಹಾಗೂ ಸಾಹಿತ್ಯ ಸಂಬಂಧಿತ ಹತ್ತು ಹಲವು ಮನರಂಜನಾ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುತ್ತಿದೆ. ಕನ್ನಡದ ಕಂಪನ್ನು ಈ ರೀತಿ ಹರಡುತ್ತಿದೆ.
ರಾಜ್ಯೋತ್ಸವಕ್ಕೆ ಭರದ ಸಿದ್ಧತೆಯಲ್ಲಿರುವ ಬಳಗ, ಕೇವಲ ಕನ್ನಡಿಗರಷ್ಟೇ ಅಲ್ಲದೇ ಭಾರತದ ಎಲ್ಲ ರಾಜ್ಯಗಳಿಂದ ಪ್ರತಿನಿಧಿಗಳನ್ನು ಆಹ್ವಾನಿಸಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪುಟಾಣಿಗಳಿಂದ ಹಿಡಿದು ಎಲ್ಲರೂ ತಮ್ಮ ತಮ್ಮ ಕಲೆಗಳನ್ನು ಪ್ರಸ್ತುತಪಡಿಸಲು ಕುತೂಹಲದಿಂದ ಕಾಯುತ್ತಿದ್ದಾರೆ. ಸಾಂಸ್ಕೃತಿಕ ಘಟಕ, ಕರ್ನಾಟಕದ ತಿನಿಸು ಮತ್ತು ವ್ಯಂಜನದ ಘಟಕ, ಬಾಲವಿಕಾಸ ಘಟಕ, ನೃತ್ಯ ಮತ್ತು ಭಾವಗೀತೆಗಳ ಘಟಕ 4ನೇ ವಾರ್ಷಿಕೋತ್ಸವದಲ್ಲಿ ಭಾಗಿಯಾಗಲಿವೆ.