ಇಸ್ಲಾಮಾಬಾದ್(ಪಾಕಿಸ್ತಾನ): ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ನಿವಾಸದಲ್ಲಿ ಗೂಢಚಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಭದ್ರತಾ ಸಿಬ್ಬಂದಿಯನ್ನು ಬಂಧಿಸಿರುವುದಾಗಿ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಹೇಳಿದೆ. ಇಸ್ಲಾಮಾಬಾದ್‌ನ ಬನಿ ಗಾಲಾದಲ್ಲಿರುವ ಇಮ್ರಾನ್ ನಿವಾಸದಲ್ಲಿ ಈ ಬೆಳವಣಿಗೆ ನಡೆದಿದೆ.
ಮಾಜಿ ಪ್ರಧಾನಿಗಳ ನಿವಾಸದಲ್ಲಿನ ಸಂವಹನಗಳನ್ನು ದಾಖಲಿಸಲು ಬೇಹುಗಾರಿಕಾ ಸಾಧನ ಅಳವಡಿಕೆಗೆ ಯತ್ನಿಸಲಾಗಿದೆ ಎಂದು ಪಿಟಿಐ ವಕ್ತಾರ ಶಹಬಾಜ್ ಗಿಲ್ ಹೇಳಿದ್ದಾರೆ. ಬಂಧಿತನಿಂದ ವಶಕ್ಕೆ ಪಡೆಯಲಾದ ಕಪ್ಪು ಯುಎಸ್‌ಬಿ ಸಾಧನವು ಅತ್ಯಂತ ಸೂಕ್ಷ್ಮವಾದ ಗ್ಯಾಜೆಟ್ ಆಗಿದ್ದು, ಅದು ಅಳವಡಿಸಿದ ಕೋಣೆ ಮತ್ತು ಅದರ ಪಕ್ಕದಲ್ಲಿರುವ ಧ್ವನಿಯನ್ನು ರೆಕಾರ್ಡ್ ಮಾಡಬಹುದು ಎಂದು ಅವರು ಹೇಳಿದ್ದಾರೆ.
ಈ ಸಾಧನ ಪಾಸ್‌ವರ್ಡ್ ಹೊಂದಿದ್ದು, ಸಾಫ್ಟ್‌ವೇರ್ ಸಹಾಯದಿಂದ ಕಾರ್ಯನಿರ್ವಹಿಸುತ್ತದೆ ಮತ್ತು ಅದರಲ್ಲಿ ಸಣ್ಣ ಮೈಕ್ ಕೂಡ ಇದೆ. ಬಹುಶಃ ಅವರ ಮುಂದಿನ ಕಾರ್ಯ ನಿವಾಸದೊಳಗೆ ಸ್ಫೋಟಕ ಸಾಧನವನ್ನು ಇಡುವುದು ಎಂದು ವಕ್ತಾರರು ಶಂಕೆ ವ್ಯಕ್ತಪಡಿಸಿದರು.
ಇಸ್ಲಾಮಾಬಾದ್ ಪೊಲೀಸರು ಗೂಢಚಾರಿಕೆ ಶಂಕೆಯ ಮೇರೆಗೆ ಖಾನ್ ಅವರ ನಿವಾಸದಿಂದ ಇನ್ನೊಬ್ಬ ವ್ಯಕ್ತಿಯನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಇಸ್ಲಾಮಾಬಾದ್ ಪೊಲೀಸರ ಪ್ರಕಾರ, "ಸ್ಥಳೀಯ ಖಾಸಗಿ ಟಿವಿ ಚಾನೆಲ್‌ಗೆ ಸೇರಿದ ವರದಿಗಾರರೊಬ್ಬರು ಸರಿಯಾಗಿ ಮಾತನಾಡಲು ಸಾಧ್ಯವಾಗದ ವ್ಯಕ್ತಿಯನ್ನು ಒಪ್ಪಿಸಿದ್ದರು ಮತ್ತು ಅವರನ್ನು ಇನ್ನೂ ಗುರುತಿಸಲಾಗಿಲ್ಲ. ಶಂಕಿತ ವ್ಯಕ್ತಿಯ ಮಾನಸಿಕ ಮತ್ತು ದೈಹಿಕ ಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುವುದು. ಪೊಲೀಸ್ ಠಾಣೆಗೆ ಕರೆದೊಯ್ಯುವ ಮೊದಲು ಬಾನಿ ಗಾಲಾದಲ್ಲಿ ವ್ಯಕ್ತಿಯನ್ನು ಬಂಧಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ ಪಕ್ಷದ ಮುಖ್ಯಸ್ಥರಾಗಿರುವ ಇಮ್ರಾನ್ ಖಾನ್ ಅವರ ಹತ್ಯೆಗೆ ಯತ್ನ ನಡೆಯುತ್ತಿದೆ ಎಂದು ಈಗಾಗಲೇ ಗುಮಾನಿಗಳೆದ್ದಿವೆ. ಅದರ ನಡುವೆಯೇ ಈ ಬೆಳವಣಿಗೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ:ಪುಟಿನ್ಗೆ ಮುಂದೆ ದೀರ್ಘಾವಧಿಯ ಜೀವನವಿಲ್ಲ, ಇನ್ನೆರಡು ವರ್ಷಗಳ ಕಾಲವಷ್ಟೇ ಬದುಕಬಹುದು: ಉಕ್ರೇನಿಯನ್ ಗುಪ್ತಚರ ಇಲಾಖೆ