ಕರ್ನಾಟಕ

karnataka

ETV Bharat / international

Cannabis Cultivation: ದೇಶದ ಖಜಾನೆ ತುಂಬಿಸಲು ಗಾಂಜಾ ಕೃಷಿಗೆ ಮುಂದಾದ ಶ್ರೀಲಂಕಾ ಸರ್ಕಾರ! - ಗಾಂಜಾ ಕೃಷಿಯು ಜಾಗತಿಕವಾಗಿ ಪ್ರಾಮುಖ್ಯತೆ

Cannabis Cultivation: ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಲು ನೆರೆಯ ರಾಷ್ಟ್ರ ಶ್ರೀಲಂಕಾ ಈಗ ಗಾಂಜಾ ಬೆಳೆಯಲು ಮುಂದಾಗಿದೆ.

SL eyes cannabis cultivation to come out of economic crisis
SL eyes cannabis cultivation to come out of economic crisis

By

Published : Aug 2, 2023, 3:51 PM IST

ಕೊಲಂಬೊ (ಶ್ರೀಲಂಕಾ) : ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿರುವ ದ್ವೀಪರಾಷ್ಟ್ರ ಶ್ರೀಲಂಕಾ ಈಗ ತನ್ನ ದೇಶದ ಖಜಾನೆ ತುಂಬಿಸಲು ಮತ್ತು ವಿದೇಶಿ ವಿನಿಮಯ ಸಂಗ್ರಹಿಸಲು ಗಾಂಜಾ ಬೆಳೆಯ ಕೃಷಿ (cannabis cultivation) ಕೈಗೊಳ್ಳಲು ಮುಂದಾಗಿದೆ. ಪ್ರಾಯೋಗಿಕ ಯೋಜನೆಯ ರೂಪುರೇಷೆಗಳನ್ನು ಬಹಿರಂಗಪಡಿಸಿದ ಪ್ರವಾಸೋದ್ಯಮ ರಾಜ್ಯ ಸಚಿವೆ ಡಯಾನಾ ಗಮಾಗೆ ಅವರು, 22 ವಿಧದ ಗಾಂಜಾ ಬೆಳೆಗಳನ್ನು ಹೊಂದಿರುವ ಶ್ರೀಲಂಕಾವು ಈ ಉದ್ಯಮದಲ್ಲಿ ವಿಶ್ವ ನಾಯಕನಾಗುವ ಸಾಮರ್ಥ್ಯವನ್ನು ಹೊಂದಿದೆ ಎಂದು ಮಾಧ್ಯಮಗಳಿಗೆ ತಿಳಿಸಿದರು.

"ಶ್ರೀಲಂಕಾದಲ್ಲಿ 22 ವಿಧದ ಗಾಂಜಾ ತಳಿಗಳಿವೆ ಮತ್ತು ಗಾಂಜಾದಿಂದ ಹಲವಾರು ಔಷಧೀಯ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಹೀಗಾಗಿ ಗಾಂಜಾ ಕೃಷಿ ಮತ್ತು ಇದರ ರಫ್ತಿನಿಂದ ದೇಶಕ್ಕೆ ಸಾಕಷ್ಟು ಲಾಭವಾಗಬಹುದು" ಎಂದು ಸಚಿವರು ಹೇಳಿದರು. ಗಾಂಜಾ ಬಗ್ಗೆ ಜವಾಬ್ದಾರಿಯುತ ಮತ್ತು ತಿಳುವಳಿಕೆಯುಳ್ಳ ಚರ್ಚೆಗಳನ್ನು ಉತ್ತೇಜಿಸುವ ಮೂಲಕ, ಮಾದಕತೆಯ ಆಚೆಗೆ ಅದರ ವಿವಿಧ ಬಳಕೆಗಳ ಮೇಲೆ ಕೇಂದ್ರೀಕರಿಸುವ ಮೂಲಕ ಮತ್ತು ಸೂಕ್ತವಾದ ನಿಯಮಗಳನ್ನು ಜಾರಿಗೊಳಿಸುವ ಮೂಲಕ ಶ್ರೀಲಂಕಾವು ಈ ಬಹು ಶತಕೋಟಿ ಡಾಲರ್ ಉದ್ಯಮವು ನೀಡುವ ಅಗಾಧ ಆರ್ಥಿಕ ಅವಕಾಶಗಳನ್ನು ಬಳಸಿಕೊಳ್ಳಲಿದೆ ಎಂದು ಅವರು ವಿವರಿಸಿದರು.

ಗಾಂಜಾ ಕೃಷಿಯು ಜಾಗತಿಕವಾಗಿ ಪ್ರಾಮುಖ್ಯತೆಯನ್ನು ಪಡೆಯುತ್ತಿದೆ ಮತ್ತು ಶ್ರೀಲಂಕಾವು ಈ ಉದ್ಯಮದಲ್ಲಿ ನಾಯಕನಾಗುವ ಸಾಮರ್ಥ್ಯವನ್ನು ಹೊಂದಿದೆ. ಗಾಂಜಾದಿಂದ ಔಷಧಗಳನ್ನು ಉತ್ಪಾದಿಸುವ ಕ್ಷೇತ್ರದಲ್ಲಿ ಲಾಭದಾಯಕ ಹೂಡಿಕೆಯ ನಿರೀಕ್ಷೆಗಳಿವೆ, ಇದು ದೇಶಕ್ಕೆ ಗಣನೀಯ ಆರ್ಥಿಕ ಪ್ರಯೋಜನಗಳನ್ನು ನೀಡುತ್ತದೆ. 10 ಎಕರೆ ಗಾಂಜಾ ತೋಟವು ಸುಮಾರು 200 ಮಿಲಿಯನ್ ಡಾಲರ್ ಆದಾಯ ಸೃಷ್ಟಿಸಬಲ್ಲದು ಎಂದು ಅವರು ತಿಳಿಸಿದರು.

ಗಾಂಜಾ ಉತ್ಪಾದನೆ ಮತ್ತು ರಫ್ತು ಮಾಡುವ ಜವಾಬ್ದಾರಿ ಹೂಡಿಕೆದಾರರ ಕೈಯಲ್ಲಿರುತ್ತದೆ. ಇದರಲ್ಲಿ ಸರ್ಕಾರದ ಹಸ್ತಕ್ಷೇಪವಿರುವುದಿಲ್ಲ ಎಂದು ಭರವಸೆ ನೀಡಿದ ಸಚಿವರು ಗಾಂಜಾ ಕೃಷಿಯಲ್ಲಿ ಬಂಡವಾಳ ಹೂಡುವಂತೆ ಹೂಡಿಕೆದಾರರಿಗೆ ಮನವಿ ಮಾಡಿದರು. “ಯಾರು ಹೂಡಿಕೆ ಮಾಡುತ್ತಾರೋ ಆ ಉದ್ಯಮ ಅವರದೇ ಆಗಿರುತ್ತದೆ. ನಾವು ಅವರಿಂದ ಹಣ ಪಡೆಯುತ್ತಿದ್ದೇವೆ ಹೊರತು ಅದನ್ನು ಮಾರಾಟ ಮಾಡುವುದು ನಮ್ಮ ಕೆಲಸವಲ್ಲ. ಆದಾಯದ ಮೂಲ ಸೃಷ್ಟಿಸುವುದು ಅವರ ಕರ್ತವ್ಯ ಮತ್ತು ಒಮ್ಮೆ ಹೂಡಿಕೆ ಮಾಡಿದ ನಂತರ ಉತ್ಪನ್ನಕ್ಕೆ ಮಾರುಕಟ್ಟೆ ಹುಡುಕುವವರೂ ಅವರೇ ಸಚಿವೆ ಡಯಾನಾ ಗಮಾಗೆ ಹೇಳಿದರು.

"ನಾವು ಅವರಿಗೆ ಸೌಲಭ್ಯಗಳನ್ನು ನೀಡಲಿದ್ದೇವೆ. ಪ್ರಯೋಗಾಲಯಗಳು, ಸಂಸ್ಕರಣಾ ಕೇಂದ್ರಗಳು ಮತ್ತು ಸಂಶೋಧನಾ ಕೇಂದ್ರಗಳು ಎಲ್ಲವೂ ಒಂದೇ ಸ್ಥಳದಲ್ಲಿರುವಂತೆ ನೋಡಿಕೊಳ್ಳಬೇಕಿದೆ. ಪ್ರಸ್ತುತ ಇದು ಪ್ರಾಯೋಗಿಕ ಯೋಜನೆಯಾಗಿದೆ" ಎಂದು ಗಮಾಗೆ ಹೇಳಿದರು. ರಫ್ತು ಮಾಡುವ ಸಲುವಾಗಿಯೇ ದೇಶದಲ್ಲಿ ಗಾಂಜಾ ಕೃಷಿ ನಡೆಸುವ ಬಗ್ಗೆ ಪರಿಶೀಲನೆ ನಡೆಸಲು ತಜ್ಞರ ಸಮಿತಿಯನ್ನು ರಚಿಸುವುದಾಗಿ ಕಳೆದ ವರ್ಷ ನವೆಂಬರ್‌ನಲ್ಲಿ 2024 ರ ಬಜೆಟ್ ಮಂಡಿಸುವಾಗ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಘೋಷಿಸಿದ್ದರು. ದೇಶಕ್ಕೆ ಸುಮಾರು $2 ಶತಕೋಟಿ ಹೂಡಿಕೆಯನ್ನು ತರುವುದಾಗಿ ಗಮಾಗೆ ಈ ಹಿಂದೆ ಭರವಸೆ ನೀಡಿದ್ದರು.

ಆದಾಗ್ಯೂ ದ್ವೀಪ ರಾಷ್ಟ್ರದ ಕಾನೂನಿನ ಪ್ರಕಾರ, ಗಾಂಜಾ ಬಳಸುವುದು ಕಾನೂನುಬಾಹಿರವಾಗಿದೆ. ಗಾಂಜಾ ಇಟ್ಟುಕೊಂಡರೆ ಮತ್ತು ಮಾರಾಟ ಮಾಡಿದರೆ ದಂಡ ಮತ್ತು ಜೈಲು ಶಿಕ್ಷೆ ವಿಧಿಸಬಹುದು. ಆದರೆ ಗಾಂಜಾ ದೇಶದಲ್ಲಿ ಅಕ್ರಮವಾಗಿ ಲಭ್ಯವಿದ್ದು, ವ್ಯಾಪಕವಾಗಿ ಬಳಸಲ್ಪಡುತ್ತದೆ. ನ್ಯಾಷನಲ್ ಡೇಂಜರಸ್ ಡ್ರಗ್ಸ್ ಕಂಟ್ರೋಲ್ ಬೋರ್ಡ್ (NDDCB) ಯ ಇತ್ತೀಚಿನ ಮಾಹಿತಿಯ ಪ್ರಕಾರ, ಶ್ರೀಲಂಕಾದಲ್ಲಿ 3 ಲಕ್ಷಕ್ಕೂ ಅಧಿಕ ಜನ ಗಾಂಜಾ ಬಳಸುತ್ತಾರೆ.

ಇದನ್ನೂ ಓದಿ : ಗಾಂಜಾ ಕೃಷಿಯನ್ನು ಕಾನೂನು ಬದ್ಧಗೊಳಿಸಿ: ನಟ ಚೇತನ್ ಟ್ವೀಟ್​

ABOUT THE AUTHOR

...view details