ಚಿಕಾಗೋ :ಕೆನಡಾದಾದ್ಯಂತ ಹಬ್ಬುತ್ತಿರುವ ಕಾಡ್ಗಿಚ್ಚಿನಿಂದಾಗಿ ದಟ್ಟ ಹೊಗೆ ಆವರಿಸಿದೆ. ಗ್ರೇಟ್ ಲೇಕ್ಸ್ ಪ್ರದೇಶದಾದ್ಯಂತ ಮತ್ತು ಮಧ್ಯ, ಪೂರ್ವ ಯುನೈಟೆಡ್ ಸ್ಟೇಟ್ಸ್ನ ಕೆಲವು ಭಾಗಗಳಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ ಕುಸಿತಗೊಂಡಿದೆ.
ಎನ್ವಿರಾನ್ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿಯ AirNow.gov ಸೈಟ್ ಮಂಗಳವಾರ ಮಧ್ಯಾಹ್ನ ಅಮೆರಿಕದ ಇಲಿನಾಯ್ಸ್, ಕೆಳ ಮಿಚಿಗನ್ ಮತ್ತು ದಕ್ಷಿಣ ವಿಸ್ಕಾನ್ಸಿನ್‌ನ ಕೆಲವು ಭಾಗಗಳಲ್ಲಿ ಗಾಳಿಯ ಗುಣಮಟ್ಟ ಕುಸಿತ ಗುರುತಿಸಿದೆ. ಚಿಕಾಗೋ, ಡೆಟ್ರಾಯಿಟ್ ಮತ್ತು ಮಿಲ್ವಾಕೀ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಕುಸಿದಿದೆ ಎಂದು ಅಲ್ಲಿನ ಹವಾಮಾನ ಅಧಿಕಾರಿಗಳು ತಿಳಿಸಿದ್ದಾರೆ.
ಚಿಕಾಗೋದಲ್ಲಿ ಯುವಕರು, ಹಿರಿಯ ವಯಸ್ಕರು ಮತ್ತು ಆರೋಗ್ಯ ಸಮಸ್ಯೆಗಳಿರುವ ನಿವಾಸಿಗಳು ಮನೆಯಿಂದ ಹೊರಬರದಂತೆ ಅಧಿಕಾರಿಗಳು ಒತ್ತಾಯಿಸಿದ್ದಾರೆ. ಚಿಕಾಗೋ ಪ್ರದೇಶದಲ್ಲಿನ ಕೆಲವು ಡೇ ಕೇರ್ ಸೆಂಟರ್‌ಗಳು ಕಳಪೆ ಗಾಳಿಯ ಗುಣಮಟ್ಟದಿಂದಾಗಿ ಮಕ್ಕಳನ್ನು ಹೊರ ಬಿಡದಂತೆ ಪೋಷಕರಿಗೆ ತಿಳಿಸಿವೆ.
ಉತ್ತರ ಕ್ವಿಬೆಕ್‌ನಲ್ಲಿನ ಬೆಂಕಿ ಮತ್ತು ಪೂರ್ವ ಗ್ರೇಟ್ ಲೇಕ್‌ಗಳ ಮೇಲಿನ ಕಡಿಮೆ ಒತ್ತಡವು ಉತ್ತರ ಮಿಚಿಗನ್‌ನ ಮೂಲಕ ಮತ್ತು ದಕ್ಷಿಣ ವಿಸ್ಕಾನ್ಸಿನ್, ಚಿಕಾಗೋದಾದ್ಯಂತ ಹೊಗೆ ಪಸರಿಸುತ್ತಿದೆ ಎಂದು ರಾಷ್ಟ್ರೀಯ ಹವಾಮಾನ ಸೇವೆಯ ಹವಾಮಾನಶಾಸ್ತ್ರಜ್ಞ ಬ್ರಿಯಾನ್ ಜಾಕ್ಸನ್ ಹೇಳಿದ್ದಾರೆ. ಉತ್ತರ ಮಾರುತವು ಹೊಗೆಯನ್ನು ಮತ್ತಷ್ಟು ದಕ್ಷಿಣಕ್ಕೆ ತಳ್ಳುತ್ತದೆ. ಮಂಗಳವಾರ ಮತ್ತು ರಾತ್ರಿಯ ನಂತರ ಇಲಿನಾಯ್ಸ್, ಇಂಡಿಯಾನಾ ಮತ್ತು ಕೆಂಟುಕಿಗೆ ಚಲಿಸುತ್ತದೆ ಎಂದು ಮಾಹಿತಿ ನೀಡಿದ್ದಾರೆ.