ಟೊರೊಂಟೊ( ಕೆನಡಾ): ಉನ್ನತ ಅಧ್ಯಯನಕ್ಕೆ ಎಂದು ಕೆನಡಾಕ್ಕೆ ತೆರಳಿ ಅಲ್ಲಿ ಅಭ್ಯಾಸ ನಡೆಸುತ್ತಿದ್ದ 700 ಭಾರತೀಯ ವಿದ್ಯಾರ್ಥಿಗಳು ವಂಚನೆಗೆ ಒಳಗಾಗಿ ನಕಲಿ ಪ್ರವೇಶ ಪತ್ರ ಹಗರಣದಲ್ಲಿ ಸಿಲುಕಿದ್ದರು. ಇತ್ತೀಚೆಗೆ ಕೆನಡಿಯನ್ ಬಾರ್ಡರ್ ಸೆಕ್ಯುರಿಟಿ ಏಜೆನ್ಸಿಯು ವಿದ್ಯಾರ್ಥಿಗಳಿಗೆ ಗಡಿಪಾರು ಪತ್ರಗಳನ್ನು ನೀಡಿತ್ತು. ಇದೀಗ ಭಾರತೀಯ ವಿದ್ಯಾರ್ಥಿಗಳನ್ನು ಗಡಿಪಾರು ಮಾಡುವುದನ್ನು ನಿಲ್ಲಿಸುವಂತೆ ಕೆನಡಾದ ಸಂಸದೀಯ ಸಮಿತಿಯು ಸರ್ವಾನುಮತದಿಂದ ಮತ ಹಾಕುವ ಮೂಲಕ ಗಡಿ ಏಜೆನ್ಸಿಗೆ ಒತ್ತಾಯಿಸಿದೆ.
"ಬಹುತೇಕ ಪಂಜಾಬ್ ಮೂಲಕ ಭಾರತೀಯ ವಿದ್ಯಾರ್ಥಿಗಳು ಕೆನಡಾದ ಶಿಕ್ಷಣ ಸಂಸ್ಥೆಗಳಿಗೆ ನೀಡುರುವ ತಮ್ಮ ಪ್ರವೇಶ ಪತ್ರಗಳು ನಕಲಿ ಎಂದು ಅಲ್ಲಿನ ಅಧಿಕಾರಿಗಳು ಕಂಡುಹಿಡಿದ ಬಳಿಕ ಕೆನಡಾದಿಂದ ಗಡಿಪಾರು ನೋಟಿಸ್ ನೀಡಲಾಗಿತ್ತು. ಮಾರ್ಚ್‌ನಲ್ಲಿ ಈ ವಿದ್ಯಾರ್ಥಿಗಳು ಕೆನಡಾದಲ್ಲಿ ಶಾಶ್ವತ ನಿವಾಸಕ್ಕಾಗಿ ಅರ್ಜಿ ಸಲ್ಲಿಸಿದಾಗ ವಿಷಯ ಬೆಳಕಿಗೆ ಬಂದಿತ್ತು.
ಇದೀಗ, ಭಾರತೀಯ ವಿದ್ಯಾರ್ಥಿಗಳನ್ನು ಗಡಿಪಾರು ಮಾಡುವುದನ್ನು ರದ್ದು ಮಾಡುವಂತೆ ಕೆನಡಾ ಬಾರ್ಡರ್ ಸರ್ವಿಸಸ್ ಏಜೆನ್ಸಿ (ಸಿಬಿಎಸ್‌ಎ) ಗೆ ಕರೆ ಮಾಡಲು ಸರ್ವಪಕ್ಷಗಳ ವಲಸೆ ಸಮಿತಿಯು ಬುಧವಾರ ಸರ್ವಾನುಮತದಿಂದ ಮತ ಚಲಾಯಿಸಿದೆ" ಎಂದು ಅಲ್ಲಿನ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಮಾನವೀಯತೆಯ ಆಧಾರದ ಮೇಲೆ ಅಥವಾ ಅನ್ಯ ಮಾರ್ಗಗಳ ಮೂಲಕ ಶಾಶ್ವತ ನಿವಾಸಕ್ಕೆ ಪರ್ಯಾಯ ಮಾರ್ಗ ಒದಗಿಸುವಂತೆ ಸಮಿತಿಯು CBSA ಗೆ ಹೇಳಿದೆ. ಇದೇ ವೇಳೆ ವಾದ ಮಂಡಿಸಿದ ಶಾಸಕ ಜೆನ್ನಿ ಕ್ವಾನ್ ಅವರು, ವಿದ್ಯಾರ್ಥಿಗಳನ್ನು ವಂಚನೆಗೆ ಒಳಗಾದವರು ಎಂದು ಉಲ್ಲೇಖಿಸಿದ್ದಾರೆ.
"ವಂಚನೆಗೆ ಒಳಗಾದ ಅನೇಕ ವಿದ್ಯಾರ್ಥಿಗಳನ್ನು ಭೇಟಿ ಮಾಡಿದ್ದೇನೆ, ಅವರು ಹಣ ಕಳೆದುಕೊಂಡಿರುವುದಲ್ಲದೇ ಆಂತಕದಲ್ಲಿದ್ದಾರೆ. ಕೆಲವರು ಗಡೀಪಾರು ನೋಟಿಸ್ ಸಹ ಹೊಂದಿದ್ದಾರೆ. ನಾವು ಆ ವಿದ್ಯಾರ್ಥಿಗಳ ಬಗ್ಗೆ ಸಹಾನುಭೂತಿ ಹೊಂದಬೇಕು ಮತ್ತು ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಮುಗ್ಧ ವಿದ್ಯಾರ್ಥಿಗಳ ವಿಷಯದಲ್ಲಿ ರಾಜಕೀಯ ಮಾಡಬಾರದು" ಎಂದು ಲಿಬರಲ್ ಸಂಸದ ಶಫ್ಕತ್ ಅಲಿ ಹೇಳಿದರು.
ಇದನ್ನೂ ಓದಿ :700 ಪಂಜಾಬಿ ವಿದ್ಯಾರ್ಥಿಗಳನ್ನು ಗಡಿಪಾರು ಮಾಡಿದ ಕೆನಡಾ: ಟ್ರಾವೆಲ್ ಏಜೆಂಟ್ರಿಂದ ವಂಚನೆ
"ವಿದ್ಯಾರ್ಥಿಗಳನ್ನು ತಪ್ಪುದಾರಿಗೆ ಎಳೆಯುವ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಪ್ರಾಮಾಣಿಕವಾಗಿ ಶಿಕ್ಷಣ ಪಡೆಯಲು ಮುಂದಾದ ವಿದ್ಯಾರ್ಥಿಗೆ ಶಿಕ್ಷೆ ವಿಧಿಸುವುದು ಅನ್ಯಾಯ" ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಕೂಡ ಈ ಬಗ್ಗೆ ಹೌಸ್ ಆಫ್ ಕಾಮನ್ಸ್‌ನಲ್ಲಿ ಹೇಳಿಕೆ ನೀಡಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ವಿ ಜೈಶಂಕರ್ ಅವರು ಈ ಹಿಂದೆ ಹೇಳಿದ್ದರು. ಜೊತೆಗೆ, "ನಾವು ಈ ವಿಚಾರವಾಗಿ ಕೆನಡಾ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ" ಎಂದು ಟ್ವೀಟ್ ಮೂಲಕ ತಿಳಿಸಿದ್ದರು.
ಏನಿದು ಪ್ರಕರಣ? :ಕೆನಡಾದ ಒಂಟಾರಿಯೋದ ಟೊರೊಂಟೊದಲ್ಲಿರುವ ಹಂಬರ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಗಡಿಪಾರು ಮಾಡುವ ಸಂಬಂಧ ಅವರಿಗೆ ಪತ್ರ ನೀಡಲಾಗಿತ್ತು. ವಿದ್ಯಾರ್ಥಿಗಳು ನಕಲಿ ದಾಖಲೆ ಮತ್ತು ಪ್ರಮಾಣ ಪತ್ರ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಜಲಂಧರ್‌ನ ಟ್ರಾವೆಲ್ ಏಜೆಂಟ್ 16 ರಿಂದ 20 ಲಕ್ಷ ರೂ. ಪಡೆದು, ನಕಲಿ ದಾಖಲೆ ಪ್ರಮಾಣಪತ್ರ ಸೃಷ್ಟಿಸಿ ಈ ವಿದ್ಯಾರ್ಥಿಗಳನ್ನು ವಿದೇಶಕ್ಕೆ ಕಳುಹಿಸಿದ್ದ. ಇದನ್ನು ಅರಿತ ಅಲ್ಲಿನ ಕಾಲೇಜು ಮತ್ತು ಸರ್ಕಾರ ಆ ವಿದ್ಯಾರ್ಥಿಗಳು ಕೆನಡಾದಿಂದ ಭಾರತಕ್ಕೆ ಮರಳುವಂತೆ ಸೂಚಿಸಿತ್ತು.