ಒಟ್ಟಾವಾ (ಕೆನಡಾ):ಭಾರತದಲ್ಲಿನ ತನ್ನ ನಾಗರಿಕರು ಎಚ್ಚರಿಕೆಯಿಂದಿರಿ ಎಂದು ಕೆನಡಾ ಸರ್ಕಾರ ಸಲಹೆ ನೀಡಿದೆ. ಕೆನಡಾ ಮತ್ತು ಭಾರತದ ನಡುವಿನ ಇತ್ತೀಚಿನ ರಾಜತಾಂತ್ರಿಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಲ್ಲಿನ ಸರ್ಕಾರ ಹೇಳಿದೆ.
ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಆರೋಪಿಸಿದ್ದಾರೆ. ಇದು ಉಭಯ ದೇಶಗಳ ನಡುವೆ ಉದ್ವಿಗ್ನತೆಗೆ ಕಾರಣವಾಗಿದೆ. ಭಾರತ ಈ ಆರೋಪಗಳನ್ನು ಸಾರಾಸಗಟಾಗಿ ತಿರಸ್ಕರಿಸಿದೆ. ಈ ನಡುವೆ ಸಾಮಾಜಿಕ ಮಾಧ್ಯಮದಲ್ಲಿ ಕೆನಡಾ ವಿರುದ್ಧ ಪ್ರತಿಭಟನೆಗೆ ಕರೆ ನೀಡಲಾಗಿದೆ. ಹಾಗಾಗಿ 'ಪ್ರಯಾಣಿಕರು ದಯವಿಟ್ಟು ಜಾಗರೂಕರಾಗಿರಿ ಮತ್ತು ಎಚ್ಚರಿಕೆಯಿಂದಿರಿ' ಎಂದು ಕೆನಡಾ ತನ್ನ ನಾಗರಿಕರಿಗೆ ಸೂಚಿಸಿದೆ.
ಕೆನಡಾದಲ್ಲಿ ನೆಲೆಸಿರುವ ಭಾರತೀಯ ಪ್ರಜೆಗಳು ಮತ್ತು ವಿದ್ಯಾರ್ಥಿಗಳಿಗೆ ಕಳೆದ ವಾರ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಿದ ಭಾರತ ಸರ್ಕಾರ ಇದೇ ರೀತಿಯ ಸಲಹೆ ನೀಡಿತ್ತು. ಕೆನಡಾದಲ್ಲಿರುವ ತನ್ನ ಪ್ರಜೆಗಳು, ವಿದ್ಯಾರ್ಥಿಗಳು ಮತ್ತು ದೇಶಕ್ಕೆ ಪ್ರಯಾಣಿಸಲು ಯೋಜಿಸುತ್ತಿರುವವರು ಎಚ್ಚರಿಕೆ ವಹಿಸುವಂತೆ ಹೇಳಿತ್ತು. ಕೆನಡಾದಲ್ಲಿ ಹೆಚ್ಚುತ್ತಿರುವ ಭಾರತ ವಿರೋಧಿ ಚಟುವಟಿಕೆಗಳು ಮತ್ತು ರಾಜಕೀಯವಾಗಿ ಮನ್ನಣೆ ಪಡೆದ ದ್ವೇಷದ ಅಪರಾಧಗಳು ಮತ್ತು ಕ್ರಿಮಿನಲ್ ಹಿಂಸಾಚಾರದ ದೃಷ್ಟಿಯಿಂದ, ಅಲ್ಲಿನ ಎಲ್ಲಾ ಭಾರತೀಯರು ಪ್ರಜೆಗಳು, ವಿದ್ಯಾರ್ಥಿಗಳು ಮತ್ತು ಪ್ರಯಾಣ ಮಾಡುವವರು ಅತ್ಯಂತ ಜಾಗರೂಕರಾಗಿರಿ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿತ್ತು.
ಇತ್ತೀಚೆಗೆ, ಬೆದರಿಕೆಗಳು ವಿಶೇಷವಾಗಿ ಭಾರತೀಯ ರಾಜತಾಂತ್ರಿಕರು ಮತ್ತು ಭಾರತ ವಿರೋಧಿ ಕಾರ್ಯಸೂಚಿಯನ್ನು ವಿರೋಧಿಸುವ ಭಾರತೀಯ ಸಮುದಾಯದ ವಿಭಾಗಗಳನ್ನು ಗುರಿಯಾಗಿರಿಸಿಕೊಂಡಿವೆ. ಆದ್ದರಿಂದ ಭಾರತೀಯ ಪ್ರಜೆಗಳು ಕೆನಡಾದಲ್ಲಿ ಅಂತಹ ಘಟನೆಗಳನ್ನು ಕಂಡ ಪ್ರದೇಶಗಳು ಮತ್ತು ಸಂಭಾವ್ಯ ಸ್ಥಳಗಳಿಗೆ ಪ್ರಯಾಣಿಸುವುದನ್ನು ತಪ್ಪಿಸಲು ಸಲಹೆ ನೀಡಿತ್ತು.
ಕೆನಡಾದಲ್ಲಿರುವ ಭಾರತೀಯ ಪ್ರಜೆಗಳು ಮತ್ತು ವಿದ್ಯಾರ್ಥಿಗಳು ತಮ್ಮ ವೆಬ್‌ಸೈಟ್‌ಗಳು ಅಥವಾ MADAD ಪೋರ್ಟಲ್ madad.gov.in ಮೂಲಕ ಒಟ್ಟಾವಾದಲ್ಲಿನ ಹೈ ಕಮಿಷನ್ ಆಫ್ ಇಂಡಿಯಾ ಅಥವಾ ಟೊರೊಂಟೊ ಮತ್ತು ವ್ಯಾಂಕೋವರ್‌ನಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಯಾವುದೇ ತುರ್ತು ಅಥವಾ ಅಹಿತಕರ ಘಟನೆಯ ಸಂದರ್ಭದಲ್ಲಿ ಕೆನಡಾದಲ್ಲಿರುವ ಭಾರತೀಯ ನಾಗರಿಕರೊಂದಿಗೆ ಉತ್ತಮ ಸಂಪರ್ಕ ಸಾಧಿಸಲು ನೋಂದಣಿ ಹೈ ಕಮಿಷನ್ ಮತ್ತು ಕಾನ್ಸುಲೇಟ್ ಜನರಲ್ ಅನ್ನು ಸಕ್ರಿಯಗೊಳಿಸುತ್ತದೆ. ಕೆನಡಾದಲ್ಲಿರುವ ಭಾರತೀಯ ಸಮುದಾಯದ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಭಾರತದ ಹೈಕಮಿಷನ್ ಮತ್ತು ಕಾನ್ಸುಲೇಟ್ ಜನರಲ್ ಕೆನಡಾದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.
ವಿವಾದವೇನು?:ಕಳೆದ ಜೂ.18 ರಂದು ಬ್ರಿಟಿಷ್ ಕೊಲಂಬಿಯಾದಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರ ಸಂಭಾವ್ಯ ಪಾತ್ರದ ಬಗ್ಗೆ ಟ್ರೂಡೊ ಗಂಭೀರ ಆರೋಪ ಮಾಡಿದ್ದರು. ಇದು ಉಭಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆಗೆ ಕಾರಣವಾಯಿತು. ಭಾರತ ಈ ಆರೋಪಗಳನ್ನು ಅಸಂಬದ್ಧ ಮತ್ತು ಪ್ರೇರಣೆ ಎಂದು ಜರಿದಿತ್ತು. ಪ್ರಕರಣ ಸಂಬಂಧ ಉಭಯ ರಾಷ್ಟ್ರಗಳು ರಾಜತಾಂತ್ರಿಕ ಅಧಿಕಾರಿಗಳನ್ನು ಉಚ್ಚಾಟನೆ ಮಾಡಿದ್ದವು.
ಜಸ್ಟಿನ್ ಟ್ರುಡೋ ಆರೋಪವೇನು?:ಸಿಖ್ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ನಿಷೇಧಿತ ಖಲಿಸ್ತಾನ್ ಟೈಗರ್ ಫೋರ್ಸ್ (ಕೆಟಿಎಫ್) ಮುಖ್ಯಸ್ಥ ಮತ್ತು ಭಾರತದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬ. ಜೂ.18ರಂದು ಪಶ್ಚಿಮ ಕೆನಡಾದ ಸರ್ರೆಯ ಗುರುದ್ವಾರದ ಹೊರಗೆ ಇಬ್ಬರು ಅಪರಿಚಿತ ಬಂದೂಕುಧಾರಿಗಳು ಈತನನ್ನು ಗುಂಡಿಕ್ಕಿ ಕೊಂದಿದ್ದರು. ಸರ್ರೆಯಲ್ಲಿ ನಡೆದ ನಿಜ್ಜರ್ (45) ಹತ್ಯೆಯಲ್ಲಿ 'ಭಾರತ ಸರ್ಕಾರದ ಏಜೆಂಟ್' ಭಾಗಿಯಾಗಿದ್ದಾರೆ ಎಂದು ಕೆನಡಾ ಪ್ರಧಾನಿ ಟ್ರೂಡೊ ಆರೋಪಿದ್ದಾರೆ.
ಇದನ್ನೂ ಓದಿ:ನಿಜ್ಜರ್ ಹತ್ಯೆಯ ಕುರಿತು ಅಮೆರಿಕ ಗುಪ್ತಚರ ಸಂಸ್ಥೆಗಳಿಂದ ಕೆನಡಾಕ್ಕೆ ಮಾಹಿತಿ: ವರದಿ