ಕರ್ನಾಟಕ

karnataka

ETV Bharat / international

5 ಲಕ್ಷ ವಲಸಿಗರಿಗೆ ವೀಸಾ ನೀಡಲಿದೆ ಕೆನಡಾ; ಭಾರತೀಯರಿಗೆ ಅತ್ಯಧಿಕ ಲಾಭ!

ಕೆನಡಾ 2025ರ ವರ್ಷದಲ್ಲಿ ತನ್ನ ದೇಶದೊಳಗೆ 5 ಲಕ್ಷ ವಲಸಿಗರನ್ನು ಬರಮಾಡಿಕೊಳ್ಳಲಿದೆ.

Indians to benefit most as Canada to admit 500,000 immigrants each year
Indians to benefit most as Canada to admit 500,000 immigrants each year

By ETV Bharat Karnataka Team

Published : Nov 2, 2023, 12:40 PM IST

ಟೊರೊಂಟೊ: 2023ರ ವೇಳೆಗೆ ಕೆನಡಾ ತನ್ನ ದೇಶದೊಳಗೆ 4,85,000 ಹೊಸ ವಲಸಿಗರಿಗೆ ಪ್ರವೇಶಾವಕಾಶ ಕಲ್ಪಿಸಲಿದ್ದು, 2025ರ ವೇಳೆಗೆ ಈ ಸಂಖ್ಯೆಯನ್ನು 5,00,000ಕ್ಕೆ ಹೆಚ್ಚಿಸಲು ಅದು ಯೋಜಿಸಿದೆ. 2024-26ರ ವಲಸೆ ಯೋಜನೆಗಳನ್ನು ಅನಾವರಣಗೊಳಿಸಿದ ವಲಸೆ, ನಿರಾಶ್ರಿತರು ಮತ್ತು ಪೌರತ್ವ ಸಚಿವ ಮಾರ್ಕ್ ಮಿಲ್ಲರ್, 2026ರಿಂದ ವಲಸೆ ಮಟ್ಟವನ್ನು 5,00,000ಕ್ಕೆ ಹೆಚ್ಚಿಸಲಾಗುವುದು ಎಂದು ಹೇಳಿದರು.

ಭಾರತವು ಕೆನಡಾಕ್ಕೆ ಪ್ರವೇಶಿಸುವ ವಲಸಿಗರು ಮತ್ತು ವಿದ್ಯಾರ್ಥಿಗಳ ಅತಿದೊಡ್ಡ ಮೂಲವಾಗಿರುವುದರಿಂದ, ಭಾರತೀಯರು ಈ ವಲಸಿಗರ ಪ್ರಮಾಣ ಹೆಚ್ಚಳದ ಅತಿದೊಡ್ಡ ಫಲಾನುಭವಿಯಾಗಲಿದ್ದಾರೆ. ಕೆನಡಾದ ವಲಸಿಗರ ನೀತಿಯ ಆರ್ಥಿಕ ವಿಭಾಗದಲ್ಲಿ ದಾಖಲೆಯ 2,81,135 ಮತ್ತು ಕುಟುಂಬ ವಿಭಾಗದಲ್ಲಿ 1,14,000 ಹೊಸ ಭಾರತೀಯರು ವಲಸಿಗ ವೀಸಾ ಪಡೆಯಲಿದ್ದಾರೆ. ಅಂದರೆ ಕೆನಡಾಕ್ಕೆ ಆಗಮಿಸುವ ವಲಸಿಗರಲ್ಲಿ ಭಾರತೀಯರೇ ಅತ್ಯಧಿಕವಾಗಿರಲಿದ್ದಾರೆ.

ಕಳೆದ ವರ್ಷ 1,18,000 ಕ್ಕೂ ಹೆಚ್ಚು ಭಾರತೀಯರು ಕೆನಡಿಯನ್ ಪರ್ಮನೆಂಟ್ ರೆಸಿಡೆನ್ಸಿ (ಪಿಆರ್) ಯನ್ನು ಪಡೆದಿದ್ದಾರೆ. ಆ ವರ್ಷದಲ್ಲಿ ಕೆನಡಾಕ್ಕೆ ಬಂದ ಒಟ್ಟು 4,37,120 ಹೊಸ ವಲಸಿಗರ ಪೈಕಿ ಕಾಲು ಭಾಗದಷ್ಟಿದೆ. ಹೊಸ ವಲಸೆಗಳಿಂದಾಗಿ ಪ್ರತಿ ವರ್ಷ ಕೆನಡಾದ ಜನಸಂಖ್ಯೆ ಶೇಕಡಾ 1.3 ರಷ್ಟು ಹೆಚ್ಚಾಗುತ್ತಿರುವುದು ಗಮನಾರ್ಹ. ವಾಸ್ತವದಲ್ಲಿ ದೇಶವು ತೀವ್ರ ವಸತಿ ಕೊರತೆಯನ್ನು ಎದುರಿಸುತ್ತಿದೆ. ಆದರೂ ದಾಖಲೆಯ ವಲಸಿಗರ ಸಂಖ್ಯೆಯು ಕೆನಡಾದ ಜನಸಂಖ್ಯೆಯು 40 ಮಿಲಿಯನ್ ದಾಟಲು ಸಹಾಯ ಮಾಡಿದೆ.

ದೇಶದಲ್ಲಿ ವಸತಿ ಸೌಕರ್ಯಗಳ ಕೊರತೆ ಇರುವುದರಿಂದ ಹೆಚ್ಚಿನ ವಲಸಿಗರಿಗೆ ಅವಕಾಶ ಮಾಡಿಕೊಡಬಾರದೆಂದು ಹಲವಾರು ಸಮೀಕ್ಷೆಗಳಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ. ಆದಾಗ್ಯೂ ಇದಕ್ಕೆ ಸೊಪ್ಪು ಹಾಕದ ಜಸ್ಟಿನ್ ಟ್ರುಡೊ ನೇತೃತ್ವದ ಸರ್ಕಾರವು ಆದಷ್ಟೂ ಹೆಚ್ಚು ವಲಸಿಗರಿಗೆ ಅವಕಾಶ ಮಾಡಿಕೊಡುವ ನೀತಿಗೆ ಅಂಟಿಕೊಂಡಿದೆ. "ಕೆನಡಾ ಹೊಸಬರನ್ನು ಸ್ವಾಗತಿಸುವುದನ್ನು ಮುಂದುವರಿಸುತ್ತದೆ ಮತ್ತು ಅವರ ಹೊಸ ಜೀವನಕ್ಕೆ ಬೆಂಬಲಿಸುವ ಭರವಸೆ ನೀಡುತ್ತದೆ" ಎಂದು ಮಿಲ್ಲರ್ ಹೇಳಿದರು.

ಕಳೆದ ವರ್ಷ 80 ಕ್ಕೂ ಹೆಚ್ಚು ದೇಶಗಳಿಂದ 46,500 ಕ್ಕೂ ಹೆಚ್ಚು ನಿರಾಶ್ರಿತರಿಗೆ ಪ್ರವೇಶ ನೀಡಿದ ಕೆನಡಾ, 2024 ರಲ್ಲಿ ದಾಖಲೆಯ 76,115 ಹೊಸ ನಿರಾಶ್ರಿತರನ್ನು ಸ್ವಾಗತಿಸಲಿದೆ. ಶಾಶ್ವತ ನಿವಾಸ, ತಾತ್ಕಾಲಿಕ ನಿವಾಸ ಮತ್ತು ಪೌರತ್ವಕ್ಕಾಗಿ ವಿಶ್ವದಾದ್ಯಂತದಿಂದ ಕೆನಡಾ 5.2 ದಶಲಕ್ಷಕ್ಕೂ ಹೆಚ್ಚು ಅರ್ಜಿಗಳನ್ನು ಕಳೆದ ವರ್ಷ ಸ್ವೀಕರಿಸಿದೆ.

ಇದನ್ನೂ ಓದಿ: ಹಮಾಸ್​ ರಕ್ತಚರಿತ್ರೆಗೆ ಅಂತ್ಯ ಹಾಡಲು ಇಸ್ರೇಲ್‌ ಪ್ರತಿಜ್ಞೆ; ಗಾಜಾ ತೊರೆದ 8 ಲಕ್ಷಕ್ಕೂ ಹೆಚ್ಚು ಜನ

ABOUT THE AUTHOR

...view details