ಕರ್ನಾಟಕ

karnataka

ETV Bharat / international

ಹವಾಮಾನ ಬದಲಾವಣೆ ಚರ್ಚೆಗೆ ಆಗಸ್ಟ್​ನಲ್ಲಿ ಸಭೆ: 185 ರಾಷ್ಟ್ರಗಳು ಭಾಗಿ - ಜಿಇಎಫ್​​ ಅಸೆಂಬ್ಲಿಯು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ

ಹವಾಮಾನ ಬದಲಾವಣೆ ಸಮಸ್ಯೆಗಳನ್ನು ಚರ್ಚಿಸಿ ಅದಕ್ಕೆ ಪರಿಹಾರೋಪಾಯಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಆಗಸ್ಟ್​ನಲ್ಲಿ ವಿಶ್ವ ನಾಯಕರ ಸಭೆ ಆಯೋಜಿಸಲಾಗಿದೆ. ಇದರಲ್ಲಿ 185 ರಾಷ್ಟ್ರಗಳು ಭಾಗಿಯಾಗಲಿವೆ.

Canada to host assembly of 185 nations to address climate change
Canada to host assembly of 185 nations to address climate change

By

Published : Jun 6, 2023, 12:46 PM IST

ಒಟ್ಟಾವಾ (ಕೆನಡಾ):ಹವಾಮಾನ ಬದಲಾವಣೆ, ಜೀವ ವೈವಿಧ್ಯತೆಯ ನಷ್ಟ ಮತ್ತು ಮಾಲಿನ್ಯ ಹೀಗೆ ಜಗತ್ತು ಮೂರು ಪ್ರಮುಖ ಸಂಕಷ್ಟದಲ್ಲಿರುವ ಮಧ್ಯೆ ಕೆನಡಾ ಈ ಸಮಸ್ಯೆಗಳ ಪರಿಹಾರಕ್ಕೆ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಿದೆ. ಇದೇ ಪ್ರಯತ್ನದ ಭಾಗವಾಗಿ ಕೆನಡಾ ಭೂಮಿಯನ್ನು ಮತ್ತಷ್ಟು ವಾಸಯೋಗ್ಯವಾಗಿಸಲು ವಿವಿಧ ರಾಷ್ಟ್ರಗಳನ್ನು ಒಟ್ಟುಗೂಡಿಸುವ ಮೂಲಕ ತನ್ನ ದೇಶದಲ್ಲಿ ಮತ್ತು ಪ್ರಪಂಚದಾದ್ಯಂತ ನಾಯಕತ್ವ ವಹಿಸುತ್ತಿದೆ.

ಇದರ ಮುಂದುವರಿದ ಭಾಗವಾಗಿ ಈಗ ಕೆನಡಾ ಬರುವ ಆಗಸ್ಟ್​ 22 ರಿಂದ 26ರವರೆಗೆ ಬ್ರಿಟಿಷ್ ಕೊಲಂಬಿಯಾದ ವ್ಯಾಂಕೋವರ್‌ನಲ್ಲಿ ಜಾಗತಿಕ ಪರಿಸರ ಸೌಲಭ್ಯದ (Global Environment Facility -GEF) ಏಳನೇ ಸಭೆ ಆಯೋಜಿಸಲಿದೆ ಎಂದು ಅಂತಾರಾಷ್ಟ್ರೀಯ ಅಭಿವೃದ್ಧಿ ಸಚಿವ ಮತ್ತು ಪೆಸಿಫಿಕ್ ಆರ್ಥಿಕ ಅಭಿವೃದ್ಧಿ ಏಜೆನ್ಸಿಯ ಜವಾಬ್ದಾರಿಯನ್ನೂ ಹೊಂದಿರುವ ಸಚಿವ ಹರ್ಜಿತ್ ಎಸ್. ಸಜ್ಜನ್ ತಿಳಿಸಿದ್ದಾರೆ. ಜೂನ್ 5 ರಂದು ಆಚರಿಸಲಾದ ವಿಶ್ವ ಪರಿಸರ ದಿನಾಚರಣೆಯ ಸಂದರ್ಭದಲ್ಲಿ ಅವರು ಈ ಘೋಷಣೆ ಮಾಡಿದರು.

ಜಿಇಎಫ್​​ ಅಸೆಂಬ್ಲಿಯು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಸಭೆ ಸೇರುತ್ತದೆ. ಇದು ಹವಾಮಾನ ಬದಲಾವಣೆ, ಜೀವವೈವಿಧ್ಯತೆಯ ನಷ್ಟ, ಮಾಲಿನ್ಯ ಮತ್ತು ಭೂಮಿ ಮತ್ತು ಸಾಗರ ಆರೋಗ್ಯದ ಮೇಲಿನ ಒತ್ತಡಗಳನ್ನು ಪರಿಹರಿಸಲು ಅಂತಾರಾಷ್ಟ್ರೀಯ ಪ್ರಯತ್ನಗಳಿಗೆ ಹಣಕಾಸು ಒದಗಿಸುವ ಜಾಗತಿಕ ಸಂಸ್ಥೆಯಾಗಿದೆ. ಈ ಸಭೆಯು ಸರ್ಕಾರಗಳ ಮಂತ್ರಿಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು, ವ್ಯವಹಾರಗಳು, ಶೈಕ್ಷಣಿಕ ಮತ್ತು ನಾಗರಿಕ ಸಮಾಜದ ಪ್ರತಿನಿಧಿಗಳು ಸೇರಿದಂತೆ 185 ದೇಶಗಳ ಪರಿಸರ ನಾಯಕರನ್ನು ಒಟ್ಟುಗೂಡಿಸುತ್ತದೆ. ಜೊತೆಗೆ ಸ್ಥಳೀಯ ಜನರು, ಮಹಿಳೆಯರು ಮತ್ತು ಯುವಜನರೊಂದಿಗೆ ತೊಡಗಿಸಿಕೊಳ್ಳಲು ಅವಕಾಶ ನೀಡುತ್ತದೆ.

COP15 ನಲ್ಲಿ ಐತಿಹಾಸಿಕ ಜಾಗತಿಕ ಜೀವವೈವಿಧ್ಯ ಚೌಕಟ್ಟಿನ ಒಪ್ಪಂದ ಮತ್ತು ಮಾರ್ಚ್‌ನಲ್ಲಿ ನ್ಯೂಯಾರ್ಕ್ ನಗರದಲ್ಲಿ ಸಮುದ್ರಗಳ ಬಗೆಗಿನ ಒಪ್ಪಂದಗಳು ನಡೆದಿವೆ. ಅದರ ನಂತರ ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಜಿಇಎಫ್​ ಸಭೆ ನಡೆಯುತ್ತಿರುವುದು ಪ್ರಾಮುಖ್ಯತೆ ಪಡೆದುಕೊಂಡಿದೆ. ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಪ್ರಕ್ರಿಯೆಗಳಿಗೆ ಜಿಇಎಫ್​ ಸಭೆಯು ಮತ್ತಷ್ಟು ವೇಗ ನೀಡಲಿದೆ. ಈ ಸಭೆಯಲ್ಲಿ ಜಾಗತಿಕ ಜೀವವೈವಿಧ್ಯ ಚೌಕಟ್ಟಿನ ನಿಧಿ (Global Biodiversity Framework Fund) ಘೋಷಣೆಯಾಗುವ ನಿರೀಕ್ಷೆಯಿದೆ. ಅಳಿವಿನಂಚಿನಲ್ಲಿರುವ ಪ್ರಭೇದಗಳು ಮತ್ತು ಅವುಗಳ ಪರಿಸರ ವ್ಯವಸ್ಥೆಗಳ ರಕ್ಷಣೆಗಾಗಿ ತುರ್ತಾಗಿ ಅಗತ್ಯವಾಗಿರುವ ನಿಧಿ ಇದಾಗಿದೆ.

ಈ ನಿಧಿಯ ಸ್ಥಾಪನೆಯಿಂದ ಪರಿಸರ ರಕ್ಷಣೆಯಲ್ಲಿ ತೊಡಗಿಸಿಕೊಳ್ಳುವಲ್ಲಿ ಖಾಸಗಿ ವಲಯಕ್ಕೆ ಬಹುಮುಖ್ಯವಾದ ಅವಕಾಶ ನೀಡಲಿದೆ. COP15 ನಲ್ಲಿ ಈ ಹೊಸ ನಿಧಿಯನ್ನು ನಿರ್ವಹಿಸಲು ವಾಷಿಂಗ್ಟನ್ ಮೂಲದ ಜಿಇಎಫ್ ಅನ್ನು ಆಯ್ಕೆ ಮಾಡಲಾಗಿದೆ. ಕೆನಡಾ ದೇಶವು ಜಿಇಎಫ್​ನ ಸ್ಥಾಪಕ ಸದಸ್ಯನಾಗಿದೆ. ಇದು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹವಾಮಾನ ಬದಲಾವಣೆಯ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುವ ಕೆನಡಾದ ಪ್ರಾಥಮಿಕ ಕಾರ್ಯವಿಧಾನವಾಗಿದೆ.

COP15 ನಲ್ಲಿ ಜಾಗತಿಕ ಪರಿಸರ ಸವಾಲುಗಳನ್ನು ಎದುರಿಸಲು ಮತ್ತು ಅಂತರರಾಷ್ಟ್ರೀಯ ಪರಿಸರ ಸಂಪ್ರದಾಯಗಳ ಅಡಿಯಲ್ಲಿ ತಮ್ಮ ಬದ್ಧತೆಗಳನ್ನು ಪೂರೈಸಲು ಅಭಿವೃದ್ಧಿಶೀಲ ರಾಷ್ಟ್ರಗಳ ಪ್ರಯತ್ನಗಳನ್ನು ಬೆಂಬಲಿಸಲು ಜಿಇಎಫ್​ನ ಎಂಟನೇ ಮರುಪೂರಣಕ್ಕೆ 2022 ಮತ್ತು 2026 ರ ನಡುವೆ 219 ಮಿಲಿಯನ್ ಡಾಲರ್ ಧನಸಹಾಯ ನೀಡುವುದಾಗಿ ಕೆನಡಾ ಈಗಾಗಲೇ ಘೋಷಿಸಿದೆ.

ಇದನ್ನೂ ಓದಿ : ಮೇ 9ರ ಗಲಭೆ: ಇಮ್ರಾನ್​ ಖಾನ್​ಗೆ ಮಿಲಿಟರಿ ನ್ಯಾಯಾಲಯದಲ್ಲಿ ವಿಚಾರಣೆ ಸಾಧ್ಯತೆ

ABOUT THE AUTHOR

...view details