ಕರ್ನಾಟಕ

karnataka

ETV Bharat / international

'ಭಾರತದ ವಿರುದ್ಧ ಖಲಿಸ್ತಾನಿಗಳನ್ನು ಪ್ರಚೋದಿಸುತ್ತಿಲ್ಲ': ರಾಜತಾಂತ್ರಿಕ ಅಧಿಕಾರಿ ಉಚ್ಚಾಟನೆಗೆ ಬೆದರಿದ ಕೆನಡಾ ಪ್ರಧಾನಿ ಟ್ರುಡೊ

ಖಲಿಸ್ತಾನಿ ಉಗ್ರ ಹರ್​ದೀಪ್​ ಸಿಂಗ್​ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಟ್ರುಡೊ ಮಂಗಳವಾರ ಬೆಳಗ್ಗೆ ಆರೋಪಿಸಿದ್ದರು. ರಾತ್ರಿ ವೇಳೆಗೆ ಉಲ್ಟಾ ಹೊಡೆದಿರುವ ಅವರು, ನಾವು ಖಲಿಸ್ತಾನಿಗಳನ್ನು ಭಾರತದ ವಿರುದ್ಧ ಎತ್ತಿಕಟ್ಟುತ್ತಿಲ್ಲ ಎಂದಿದ್ದಾರೆ.

ಕೆನಡಾ ಪ್ರಧಾನಿ ಟ್ರುಡೊ
ಕೆನಡಾ ಪ್ರಧಾನಿ ಟ್ರುಡೊ

By ETV Bharat Karnataka Team

Published : Sep 19, 2023, 10:57 PM IST

ನವದೆಹಲಿ:ಖಲಿಸ್ತಾನಿ ವಿಚಾರವಾಗಿ ಭಾರತದಿಂದ ದೂರವಾಗಿರುವ ಕೆನಡಾ ರಾಜತಾಂತ್ರಿಕ ಅಧಿಕಾರಿಯನ್ನು ಉಚ್ಚಾಟನೆ ಮಾಡಿತ್ತು. ಅದಕ್ಕೆ ಭಾರತವೂ ತಕ್ಕ ತಿರುಗೇಟು ನೀಡಿ ಕೆನಡಾದ ರಾಜತಾಂತ್ರಿಕ ಹಿರಿಯ ಅಧಿಕಾರಿಯನ್ನೂ ದೇಶದಿಂದ ಹೊರಹೋಗಲು ಸೂಚಿಸಿದೆ. ಇದರ ಬೆನ್ನಲ್ಲೇ, 'ತಾನು ಭಾರತದ ವಿರುದ್ಧ ಖಲಿಸ್ತಾನಿಗಳಿಗೆ ಪ್ರಚೋದನೆ ನೀಡುತ್ತಿಲ್ಲ. ಪ್ರಧಾನಿ ಮೋದಿ ಸರ್ಕಾರ ಖಲಿಸ್ತಾನಿ ಹೋರಾಟವನ್ನು ಗಂಭೀರವಾಗಿ ಪರಿಗಣಿಸಬೇಕು' ಎಂದು ಹೇಳಿದೆ.

ಖಲಿಸ್ತಾನಿ ಉಗ್ರ ಹರ್​​ದೀಪ್​ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ತಮ್ಮ ದೇಶವು ಹೇಳುತ್ತಿಲ್ಲ. ಆದರೆ, ಖಲಿಸ್ತಾನಿಗಳ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಗಂಭೀರತೆ ತಾಳಬೇಕು ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಮಂಗಳವಾರ ಹೇಳಿದ್ದಾರೆ.

ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಟ್ರುಡೊ, ಭಾರತ ಸರ್ಕಾರವು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಾಗಿದೆ. ನಾವು ಯಾರ ವಿರುದ್ಧವೂ ಯಾರನ್ನೂ ಎತ್ತಿಕಟ್ಟುತ್ತಿಲ್ಲ. ಖಲಿಸ್ತಾನಿಗಳ ಹೋರಾಟ ಹೆಚ್ಚಾಗಿದೆ. ಹೀಗಾಗಿ ಭಾರತ ಕೂಡ ಈ ಬಗ್ಗೆ ಗಂಭೀರವಾಗಿರಬೇಕು ಎಂದು ಹೇಳಿದ್ದಾರೆ. ಮಂಗಳವಾರ ಬೆಳಗ್ಗೆಯಷ್ಟೇ ಕೆನಡಾ ಪ್ರಧಾನಿ ಟ್ರುಡೋ ಖಲಿಸ್ತಾನ ಉಗ್ರನ ಹತ್ಯೆಯಲ್ಲಿ ಭಾರತದ ರಾಜತಾಂತ್ರಿಕ ಅಧಿಕಾರಿಯ ಪಾತ್ರವಿದೆ. ಹೀಗಾಗಿ ಅವರನ್ನು ಉಚ್ಚಾಟಿಸಲಾಗುವುದು ಎಂದಿತ್ತು. ಸಂಜೆ ವೇಳೆಗೆ ಉಲ್ಟಾ ಹೊಡೆದಿದೆ.

ಕೆನಡಾಗೆ ಭಾರತ ತಿರುಗೇಟು:ಖಲಿಸ್ತಾನಿ ಉಗ್ರ ಹರ್​ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂಬ ಕೆನಡಾದ ಆರೋಪವನ್ನು ಭಾರತ ಸರ್ಕಾರ ಮಂಗಳವಾರ ತಿರಸ್ಕರಿಸಿತ್ತು. ಇದು ಅಸಂಬದ್ಧ ಮತ್ತು ಪ್ರೇರಿತ ಆರೋಪ ಎಂದು ಜರಿದಿತ್ತು. ನಮ್ಮ ದೇಶ ಪ್ರಜಾಪ್ರಭುತ್ವದ ಕಾನೂನಾತ್ಮಕ ಆಳ್ವಿಕೆಗೆ ಒಳಪಟ್ಟ ಪ್ರಜಾಸತ್ತಾತ್ಮಕ ರಾಜಕೀಯವಾಗಿದೆ. ಉಗ್ರನ ಹತ್ಯೆಯಲ್ಲಿ ಭಾಗಿಯಾಗಿಲ್ಲ ಎಂದು ವಿದೇಶಾಂಗ ಇಲಾಖೆ ಹೇಳಿಕೆ ತಿರುಗೇಟು ನೀಡಿತ್ತು.

ಕೆನಡಾ ಆರೋಪವೇನು?:ಗುರುನಾನಕ್ ಸಿಖ್ ಗುರುದ್ವಾರದ ಅಧ್ಯಕ್ಷ, ಕೆನಡಾದಲ್ಲಿ ಸಿಖ್ ಫಾರ್ ಜಸ್ಟೀಸ್ ಎಂಬ ಸಂಘಟನೆ ಮತ್ತು ಖಲಿಸ್ತಾನ್ ಟೈಗರ್ ಫೋರ್ಸ್​ ಮುಖ್ಯಸ್ಥನಾಗಿ ಗುರುತಿಸಿಕೊಂಡಿದ್ದ ಹರ್ದೀಪ್ ಸಿಂಗ್ ನಿಜ್ಜರ್​​ನನ್ನು ಈ ವರ್ಷದ ಜೂನ್‌ 18ರಂದು ಕೆನಡಾದ ಸರ್ರೆಯಲ್ಲಿರುವ ಗುರುನಾನಕ್ ಸಿಖ್ ಗುರುದ್ವಾರದ ಬಳಿ ಇಬ್ಬರು ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಇದೀಗ ಕೆನಡಾ ಪ್ರಧಾನಿ ಟ್ರೂಡೊ ಈ ಹತ್ಯೆಯ ಹಿಂದೆ ಭಾರತ ಸರ್ಕಾರದ ಏಜೆಂಟರ ಕೈವಾಡವಿದೆ ಎಂಬುದಕ್ಕೆ ಕಾರಣಗಳಿವೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ:ಖಲಿಸ್ತಾನಿ ಉಗ್ರನ ಹತ್ಯೆ ಪ್ರಕರಣ: ಭಾರತದ ರಾಜತಾಂತ್ರಿಕ ಅಧಿಕಾರಿ ಉಚ್ಛಾಟಿಸಿದ ಕೆನಡಾ

ABOUT THE AUTHOR

...view details