ಕರ್ನಾಟಕ

karnataka

ETV Bharat / international

ನಾಜಿಗಳಿಗಾಗಿ ಹೋರಾಡಿದ ವ್ಯಕ್ತಿಗೆ ಸಂಸತ್ತಿಗೆ ಆಹ್ವಾನ: ಕೆನಡಾ ಹೌಸ್ ಆಫ್ ಕಾಮನ್ಸ್ ಸ್ಪೀಕರ್ ರಾಜೀನಾಮೆ - ಆಂಥೋನಿ ರೋಟಾ

ನಾಜಿ ಘಟಕಕ್ಕಾಗಿ ಹೋರಾಡಿದ ವ್ಯಕ್ತಿಯನ್ನು ಉಕ್ರೇನ್ ಅಧ್ಯಕ್ಷರ ಭಾಷಣದ ಸಂದರ್ಭದಲ್ಲಿ ಪಾಲ್ಗೊಳ್ಳಲು ಸಂಸತ್ತಿಗೆ ಆಹ್ವಾನಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಕೆನಡಾ ಸ್ಪೀಕರ್‌ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

Canada  House of Commons speaker resign
ಪ್ರಾತಿನಿಧಿಕ ಚಿತ್ರ

By PTI

Published : Sep 27, 2023, 8:00 AM IST

ಟೊರೊಂಟೊ: 2ನೇ ಮಹಾಯುದ್ಧದ ಸಂದರ್ಭದಲ್ಲಿ ಜರ್ಮನಿಯ ನಾಜಿ ಸೇನಾ ಘಟಕಕ್ಕಾಗಿ ಹೋರಾಡಿದ ವ್ಯಕ್ತಿಯನ್ನು ಉಕ್ರೇನ್ ಅಧ್ಯಕ್ಷರ ಭಾಷಣದಲ್ಲಿ ಪಾಲ್ಗೊಳ್ಳಲು ಸಂಸತ್ತಿಗೆ ಆಹ್ವಾನಿಸಿದ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಕೆನಡಾದ ಹೌಸ್ ಆಫ್ ಕಾಮನ್ಸ್ ಸ್ಪೀಕರ್ ಮಂಗಳವಾರ ರಾಜೀನಾಮೆ ಸಲ್ಲಿಸಿದರು.

ಕೆನಡಾದ ಸರ್ಕಾರದ ಆದೇಶದ ಮೇರೆಗೆ ಆಂಥೋನಿ ರೋಟಾ ಹೌಸ್ ಆಫ್ ಕಾಮನ್ಸ್‌ನ ಪ್ರತಿಷ್ಠಿತ ಸ್ಪೀಕರ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆಂಥೋನಿ ರೋಟಾ ಅವರು ಮಂಗಳವಾರ ಎಲ್ಲಾ ರಾಜಕೀಯ ಪಕ್ಷಗಳ ನಾಯಕರನ್ನು ಭೇಟಿ ಮಾಡಿದ ನಂತರ ತಮ್ಮ ಸ್ಥಾನದಿಂದ ಕೆಳಗಿಳಿಯುವುದಾಗಿ ಘೋಷಿಸಿದರು.

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಶುಕ್ರವಾರ ಕೆನಡಾದ ಸಂಸತ್ತಿನಲ್ಲಿ ಭಾಷಣ ಮಾಡುವಾಗ ಈ ಘಟನೆ ನಡೆದಿದೆ. ಝೆಲೆನ್ಸ್ಕಿ ಭಾಷಣದ ನಂತರ, ರೋಟಾ ಅವರು 98 ವರ್ಷದ ಯಾರೋಸ್ಲಾವ್ ಹುಂಕಾ ಅವರನ್ನು ಪರಿಚಯಿಸಿದರು. "ಹುಂಕಾ ಉಕ್ರೇನಿಯನ್ ಕೆನಡಾದ ಯುದ್ಧದ ಅನುಭವಿ. ರಷ್ಯನ್ನರ ವಿರುದ್ಧ ಉಕ್ರೇನಿಯನ್ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ" ಎಂದು ಬಣ್ಣಿಸಿದರು. ಮೊದಲ ಉಕ್ರೇನಿಯನ್ ವಿಭಾಗವನ್ನು ವಾಫೆನ್-ಎಸ್‌ಎಸ್ ಗಲಿಷಿಯಾ ವಿಭಾಗ ಅಥವಾ ಎಸ್‌ಎಸ್ 14 ನೇ ವಾಫೆನ್ ವಿಭಾಗ ಎಂದು ಕರೆಯಲಾಗುತ್ತದೆ. ಇದು ನಾಜಿಗಳ ನೇತೃತ್ವದಲ್ಲಿ ಸ್ವಯಂಸೇವಾ ಘಟಕವಾಗಿದೆ ಎಂದು ಅವರು ತಿಳಿಸಿದರು.

ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಮತ್ತು ಝೆಲೆನ್ಸ್ಕಿ ಅವರು ಸಂಸತ್ತಿನ ಗ್ಯಾಲರಿಯಲ್ಲಿ ಕುಳಿತಿದ್ದ ಹುಂಕಾಗೆ ನಿಂತು ಚಪ್ಪಾಳೆ ತಟ್ಟಿದರು. ಇದನ್ನು ಟ್ರುಡೊ ಅವರು ಅತ್ಯಂತ ಮುಜುಗರದ ಸಂಗತಿ ಎಂದು ಕರೆದಿದ್ದಾರೆ.

ರೋಟಾ ಅವರು ಭಾನುವಾರ ಮೊದಲು ಕ್ಷಮೆಯಾಚಿಸಿದರು. ಬಳಿಕ ಸೋಮವಾರ ಎಲ್ಲಾ ಸಂಸದರಲ್ಲಿ ಮತ್ತೊಮ್ಮೆ ಕ್ಷಮೆಯಾಚಿಸಿದರು. ತಮ್ಮ ತಪ್ಪಿನ ಸಂಪೂರ್ಣ ಹೊಣೆಗಾರಿಕೆಯನ್ನು ಅವರು ಹೊತ್ತುಕೊಂಡಿದ್ದಾರೆ. "ನಾನು ಈ ಸದನದ ನಿಮ್ಮ ವಿನಮ್ರ ಸೇವಕನಾಗಿ ಕಾರ್ಯನಿರ್ವಹಿಸಿದ್ದೇನೆ. ಈ ಸ್ಥಾನದ ಪ್ರಮುಖ ಜವಾಬ್ದಾರಿಗಳನ್ನು ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ನಿರ್ವಹಿಸುತ್ತಿದ್ದೇನೆ" ಎಂದು ರೋಟಾ ತಮ್ಮ ರಾಜೀನಾಮೆ ಭಾಷಣದಲ್ಲಿ ಹೇಳಿದರು. ಆ ವ್ಯಕ್ತಿಗೆ ಸಾರ್ವಜನಿಕ ಮನ್ನಣೆ ಕೆನಡಾದಲ್ಲಿ ಮತ್ತು ಪ್ರಪಂಚದಾದ್ಯಂತದ ಯಹೂದಿ ಸಮುದಾಯವನ್ನು ಒಳಗೊಂಡಂತೆ ವ್ಯಕ್ತಿಗಳು ಮತ್ತು ಸಮುದಾಯಗಳಿಗೆ ನೋವನ್ನು ಉಂಟುಮಾಡಿದೆ. ನನ್ನ ತಪ್ಪಿಗಾಗಿ ವಿಷಾದವನ್ನು ವ್ಯಕ್ತಪಡಿಸುತ್ತೇನೆ ಎಂದು ಪುನರುಚ್ಚರಿಸಿದರು.

ರೋಟಾ ಅವರು ಬುಧವಾರ ಸ್ಪೀಕರ್​ ಸ್ಥಾನದಿಂದ ನಿರ್ಗಮಿಸಲಿದ್ದಾರೆ. ಹೊಸ ಸ್ಪೀಕರ್ ಆಯ್ಕೆಗೆ ಸಿದ್ಧತೆಗೆ ಅನುಮತಿಸಲಾಗಿದೆ. ಸ್ಪೀಕರ್ ರಾಜೀನಾಮೆ ನೀಡುವಲ್ಲಿ ಗೌರವಾನ್ವಿತ ಕೆಲಸ ಮಾಡಿದ್ದಾರೆ ಎಂದು ಸರ್ಕಾರದ ಲಿಬರಲ್ ಹೌಸ್ ನಾಯಕಿ ಕರೀನಾ ಗೌಲ್ಡ್ ಹೇಳಿದ್ದಾರೆ. ಸರ್ಕಾರಕ್ಕೆ ಅಥವಾ ಉಕ್ರೇನ್‌ನ ನಿಯೋಗಕ್ಕೆ ತಿಳಿಸದೆಯೇ ರೋಟಾ ಹುಂಕಾ ಅವರನ್ನು ಆಹ್ವಾನಿಸಿದ್ದಾರೆ. ಈ ಘಟನೆಯು ಈ ಸದನದ ಎಲ್ಲಾ ಸದಸ್ಯರಿಗೆ ಮತ್ತು ಎಲ್ಲಾ ಕೆನಡಿಯನ್ನರಿಗೆ ನೋವುಂಟು ಮಾಡುವಂತೆ ವೈಯಕ್ತಿಕವಾಗಿ ನನಗೆ ನೋವುಂಟು ಮಾಡಿದೆ ಎಂದು ಅವರು ಹೇಳಿದರು. ಕೆನಡಾದ ಆರೋಗ್ಯ ಸಚಿವ ಮಾರ್ಕ್ ಹಾಲೆಂಡ್ ಅವರು ಈ ಘಟನೆಯನ್ನು ನಂಬಲಾಗದಷ್ಟು ಮುಜುಗರದ ಸಂಗತಿ ಎಂದು ಕರೆದಿದ್ದಾರೆ.

ಇದನ್ನೂ ಓದಿ:ಕೆನಡಾದಲ್ಲಿ ಭಯೋತ್ಪಾದಕರು ಸುರಕ್ಷಿತ ನೆಲೆ ಕಂಡುಕೊಂಡಿದ್ದಾರೆ: ಶ್ರೀಲಂಕಾದ ವಿದೇಶಾಂಗ ಸಚಿವ ಅಲಿ ಸಬ್ರಿ

ABOUT THE AUTHOR

...view details