ಡಾಕರ್ (ಸೆನೆಗಲ್):ಪಶ್ಚಿಮ ಆಫ್ರಿಕಾದ ಪೂರ್ವ ಬುರ್ಕಿನಾ ಫಾಸೊದಲ್ಲಿ ಬಸ್ಸೊಂದು ರಸ್ತೆಬದಿಯಲ್ಲಿ ಹೂತಿಟ್ಟ ಬಾಂಬ್ ಮೇಲೆ ಚಲಿಸಿದೆ. ಪರಿಣಾಮ ಅದು ಸ್ಫೋಟಗೊಂಡು ಹತ್ತು ಜನರು ಸಾವನ್ನಪ್ಪಿದ್ದರೆ, ಹಲವರು ಗಾಯಗೊಂಡಿದ್ದಾರೆ ಎಂದು ಸೆನೆಗಲ್ ಸರ್ಕಾರ ಸೋಮವಾರ ತಿಳಿಸಿದೆ.
ರಸ್ತೆ ಬದಿ ಹೂತಿಟ್ಟ ಬಾಂಬ್ ಎಂದರೆ ಉದ್ದೇಶಪೂರ್ವಕವಾಗಿಯೇ ಯಾವುದಾದರೂ ವಾಹನವನ್ನು ಟಾರ್ಗೆಟ್ ಮಾಡಿ, ರಸ್ತೆ ಬದಿಯಲ್ಲಿ ಸ್ಫೋಟಕ ಸಾಧನವನ್ನು ಹೂತಿಡಲಾಗುತ್ತದೆ. ವಾಹನ ಬರುವ ವೇಳೆಗ ಆ ಸಾಧನ ಸ್ಫೋಟಗೊಳ್ಳುವಂತೆ ಮಾಡಲಾಗುತ್ತದೆ.
ಭಾನುವಾರ ಮಧ್ಯಾಹ್ನ ಬೌಗುಯಿ ಗ್ರಾಮದ ಬಳಿ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಮಿನಿಬಸ್ ಆ ಸ್ಫೋಟಕ ಹೂತಿಟ್ಟ ಸ್ಥಳದ ಮೇಲೆ ಚಲಿಸಿದ ಪರಿಣಾಮ ಬಾಂಬ್ ಸ್ಫೋಟಗೊಂಡಿದೆ. ಗಾಯಾಳುಗಳನ್ನು ಪೂರ್ವದ ಮುಖ್ಯ ಪಟ್ಟಣ ಫಾಡಾ ಎನ್'ಗೌರ್ಮಾದ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ನಲ್ಲಿದ್ದ ಉಳಿದ ಪ್ರಯಾಣಿಕರು ಕಾಣೆಯಾಗಿದ್ದು, ಕಾಣೆಯಾದ ಪ್ರಯಾಣಿಕರ ಶೋಧ ಕಾರ್ಯ ನಡೆಯುತ್ತಿದೆ. ಸರ್ಕಾರದಿಂದ ಅವಘಡ ಸಂಭವಿಸಿದ ಸ್ಥಳದಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಕರ್ನಲ್ ಹುಬರ್ಟ್ ಯಾಮಿಯೊಗೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸೆನಗಲ್ನಲ್ಲಿ ಇಂತಹ ಘಟನೆ ನಡೆಯುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. ಇಂತಹ ಬಾಂಬ್ ದಾಳಿಗಳಲ್ಲಿ ಸಾವಿರಾರು ಜನ ಸಾವನ್ನಪ್ಪಿದ್ದರೆ, 2 ಮಿಲಿಯನ್ಗೂ ಹೆಚ್ಚು ಜನ ದೇಶವನ್ನು ತೊರೆದು ಸ್ಥಳಾಂತರಗೊಂಡಿದ್ದಾರೆ. ಇಂತಹ ದಾಳಿಗಳನ್ನು ತಡೆಹಿಡಿಯುವಲ್ಲಿ ಇಲ್ಲಿನ ಸರ್ಕಾರ ವಿಫಲವಾಗಿದೆ. ಮತ್ತೆ ಮತ್ತೆ ಬಾಂಬ್ ದಾಳಿಗಳು ನಡೆಯುತ್ತಲೇ ಇವೆ.
ಆಂತರಿಕ ಭದ್ರತಾ ವರದಿ ಪ್ರಕಾರ, ಒಂದು ದಿನದ ಅಂತರದಲ್ಲಿ ಇಲ್ಲಿ ಎರಡು ಬಾಂಬ್ ದಾಳಿಗಳು ಸಂಭವಿಸಿವೆ. ಶನಿವಾರ ಔಗರೂ ಮತ್ತು ಮಟಿಯಾಕೋಲಿ ಗ್ರಾಮಗಳ ನಡುವೆ ಪೂರ್ವದಲ್ಲಿ ಬಾಂಬ್ ಸ್ಫೋಟಗೊಂಡಿದ್ದು, ಅದಾದ ಒಂದು ದಿನದ ನಂತರ ಪೂರ್ವ ಬುರ್ಕಿನಾ ಫಾಸೊದಲ್ಲಿ ಬಸ್ ರಸ್ತೆ ಬದಿ ಹೂತಿಟ್ಟ ಬಾಂಬ್ಗೆ ಡಿಕ್ಕಿ ಹೊಡೆದಿದೆ. ಈ ಬಾಂಬ್ ದಾಳಿಗಳು ಗಣಿಗಾರಿಕೆ ಸ್ಥಳದ ಸಮೀಪವಿರುವ ಘಟಕಗಳನ್ನು ಗುರಿಯಾಗಿಸಿದೆ ಎಂದು ವರದಿ ತಿಳಿಸಿದೆ. ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರಲ್ಲಿ ಕೆಲವರು ಸಾವನ್ನಪ್ಪಿದ್ದರೆ ಇನ್ನೂ ಕೆಲವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಲ್ಲೂ ಹೆಚ್ಚಿನವರು ಈ ದಾಳಿಗಳಿಂದ ಭಯಭೀತರಾಗಿದ್ದಾರೆ.
ಇದನ್ನೂ ಓದಿ:ಅಫ್ಘಾನಿಸ್ತಾನದ ಧಾರ್ಮಿಕ ಶಾಲೆಯಲ್ಲಿ ಬಾಂಬ್ ಸ್ಫೋಟ: ವಿದ್ಯಾರ್ಥಿಗಳು ಸೇರಿ 19 ಸಾವು