ಇಸ್ಲಾಮಾಬಾದ್: ಬಾಲ್ಟಿಸ್ತಾನದ ಡಯಮರ್ ಜಿಲ್ಲೆಯ ಡರೆಲ್ನ ಸಾಮಿಗಲ್ನಲ್ಲಿರುವ ಬಾಲಕಿಯರ ಮಾಧ್ಯಮಿಕ ಶಾಲೆಯನ್ನು ಸುಟ್ಟುಹಾಕಿರುವ ಘಟನೆ ನವೆಂಬರ್ 7 ಮತ್ತು 8ರ ತಡ ರಾತ್ರಿ ನಡೆದಿದೆ. ಇಲ್ಲಿನ ಟಿಟಿಪಿ ಭಯೋತ್ಪಾದಕರು ಮತ್ತು ಇಸ್ಲಾಮಿಕ್ ಸಂಘಟನೆಯ ಹಿಂಬಾಲಕರು ಈ ಕೃತ್ಯ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಸಾಮಿಗಲ್ ಪೇನ್ನ ಜನಸಂಖ್ಯೆ ಸುಮಾರು 7,000 ರದಷ್ಟಿದೆ. ಇಷ್ಟು ಜನಸಂಖ್ಯೆಗೆ ಇದ್ದ ಏಕೈಕ ಬಾಲಕಿಯರ ಶಾಲೆ ಇದಾಗಿತ್ತು. ಈ ಶಾಲೆಯಲ್ಲಿ ಸುಮಾರು 68 ಬಾಲಕಿಯರು ಅಧ್ಯಯನ ಮಾಡುತ್ತಿದ್ದರು. ಈ ಘಟನೆಯ ಕುರಿತು ಇಲ್ಲಿಯವರೆಗೆ ಯಾವುದೇ ಭಯೋತ್ಪದಕ ಸಂಘಟನೆಯು ಜವಾಬ್ದಾರಿ ವಹಿಸಿಕೊಂಡಿಲ್ಲ.
ಪಾಕಿಸ್ತಾನದ ಸಂವಿಧಾನದ ಅನುಚ್ಛೇದ 25 ಎ ರಲ್ಲಿ ಶಿಕ್ಷಣ ಮೂಲಭೂತ ಹಕ್ಕಾಗಿದೆ. ಆದರೆ ಮೂಲಭೂತವಾದಿಗಳು ಗಿಲ್ಗಿಟ್ ಬಾಲ್ಟಿಸ್ತಾನದ ಹೆಣ್ಣುಮಕ್ಕಳು ಶಿಕ್ಷಣ ಪಡೆಯುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಗಿಲ್ಗಿಟ್ ಬಾಲ್ಟಿಸ್ತಾನದ ಹೆಚ್ಚಿನ ಭಾಗಗಳಲ್ಲಿ, ಅದರಲ್ಲೂ ವಿಶೇಷವಾಗಿ ಡಯಮರ್ನಲ್ಲಿ ಬಾಲಕಿಯರ ಶಿಕ್ಷಣವನ್ನು ಮುಸ್ಲಿಂ ತೀವ್ರಗಾಮಿಗಳು ನಿಷಿದ್ಧವೆಂದು ಪರಿಗಣಿಸಿದ್ದಾರೆ.