ಕಛ್ (ಗುಜರಾತ್):ಕಚ್‌ನ ಸಮುದ್ರ ಗಡಿಯಲ್ಲಿ ಆಗಾಗ ಕಳ್ಳಸಾಗಾಣಿಕೆ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಜೊತೆಗೆ ಪಾಕಿಸ್ತಾನಿ ನುಸುಳುಕೋರರು ಮತ್ತು ಪಾಕಿಸ್ತಾನಿ ಮೀನುಗಾರರು ಕೂಡ ಆಗಾಗ ಭಾರತದ ಯೋಧರ ಬಳಿ ಸಿಕ್ಕಿ ಬೀಳುತ್ತಿದ್ದಾರೆ. ಪ್ರಸ್ತತ ಬಿಎಸ್‌ಎಫ್ ತಂಡವು ಭಾರತದ ಕಚ್-ಪಾಕಿಸ್ತಾನ ಜಲ ಗಡಿ ಬಳಿಯ ಸರ್ ಕ್ರೀಕ್ ಪ್ರದೇಶದಲ್ಲಿ ಅನುಮಾನಾಸ್ಪದ ವ್ಯಕ್ತಿಯೊಬ್ಬನನ್ನು ಬಂಧಿಸಿದೆ. ಬಂಧಿತ ವ್ಯಕ್ತಿಯ ಅನುಮಾನಾಸ್ಪದ ಚಲನವಲನವನ್ನು ಗಮನಿಸಿದ ಬಿಎಸ್‌ಎಫ್ ಸಿಬ್ಬಂದಿ ತಕ್ಷಣ ಸ್ಥಳಕ್ಕಾಗಮಿಸಿ, ಸರ್ ಕ್ರೀಕ್ ಬಳಿ ಇಂಜಿನ್ ಅಳವಡಿಸಿದ ಮರದ ದೋಣಿಯೊಂದಿಗೆ ಪಾಕಿಸ್ತಾನದ ಮೀನುಗಾರನನ್ನು ಅರೆಸ್ಟ್ ಮಾಡಿದ್ದಾರೆ.
ಪಾಕಿಸ್ತಾನಿ ಮೀನುಗಾರನನ್ನು ತನಿಖೆಗೊಳಪಡಿಸಿದ ಬಿಎಸ್ಎಫ್:ಬಂಧಿತ ಪಾಕಿಸ್ತಾನಿ ಮೀನುಗಾರನನ್ನು ಮೊಹಮ್ಮದ್ ಖಮೇಸಾ ಎಂದು ಗುರುತಿಸಲಾಗಿದೆ. ಈತನ ವಯಸ್ಸು 50 ವರ್ಷ. ಈ ವ್ಯಕ್ತಿ ಪಾಕಿಸ್ತಾನದ ಸಿಂಧ್‌ನ ಸುಜಾವಾಲ್ ಜಿಲ್ಲೆಯ ವಿಲ್ ಶಹಬಂದರ್ ನಿವಾಸಿ ಎಂದು ತಿಳಿದು ಬಂದಿದೆ. ಬಿಎಸ್ಎಫ್ ಸಿಬ್ಬಂದಿ ಪಾಕಿಸ್ತಾನದ ದೋಣಿ ಮತ್ತು ಪಾಕಿಸ್ತಾನಿ ಮೀನುಗಾರನ ಬಗ್ಗೆ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಈ ಹಿಂದೆಯೂ ಪಾಕಿಸ್ತಾನಿ ವ್ಯಕ್ತಿಯೊಬ್ಬನ ಬಂಧನ:ವಾರದ ಹಿಂದೆ, ಪಕ್ಷಿಗಳ ಸಮೇತ ಭಾರತದ ಜಲಗಡಿಯಲ್ಲಿ ಅಕ್ರಮವಾಗಿ ಪ್ರವೇಶಿಸಿದ್ದ 30 ವರ್ಷದ ಪಾಕಿಸ್ತಾನಿ ಪ್ರಜೆಯೊಬ್ಬನನ್ನು ಬಿಎಸ್‌ಎಫ್ ಯೋಧರು ಬಂಧನ ಮಾಡಿದ್ದರು. ಪಕ್ಷಿಗಳು ಮತ್ತು ಏಡಿಗಳನ್ನು ಹಿಡಿಯುವ ದುರಾಸೆಯಲ್ಲಿ ಕಚ್‌ನ ಕಡಲ ಗಡಿಯನ್ನು ಪ್ರವೇಶ ಮಾಡಿದ್ದನು. ಪಾಕಿಸ್ತಾನಿ ಮೀನುಗಾರರು ಮೀನುಗಾರಿಕೆಯ ದುರಾಸೆಯಿಂದ ಭಾರತದ ಗಡಿಯನ್ನು ಪ್ರವೇಶ ಮಾಡುತ್ತಿದ್ದಾರೆ. ಭಾರತ ಜಲ ಗಡಿಯಲ್ಲಿ ಪಾಕಿಸ್ತಾನಿ ವ್ಯಕ್ತಿಗಳು ಅಕ್ರಮ ಪ್ರವೇಶ ಮಾಡುವುದು ಹೆಚ್ಚಾಗುತ್ತದೆ. ಇದಕ್ಕೆ ಕಡಿವಾಣ ಹಾಕಲು ಭಾರತದ ಗಡಿ ಪ್ರದೇಶಗಳಲ್ಲಿ ಬಿಎಸ್ಎಫ್ ಹದ್ದಿನ ಕಣ್ಣು ಇರಿಸಿದೆ.