ಲಂಡನ್ (ಇಂಗ್ಲೆಂಡ್): ಇಂಗ್ಲೆಂಡ್ನಲ್ಲಿ ಅತಿ ಹೆಚ್ಚು ತಾಪಮಾನ ದಾಖಲಾಗಿದ್ದು, ಪ್ರಿನ್ಸ್ ವಿಲಿಯಂ ಅವರ ಮುಂದೆ ನಡೆಯುತ್ತಿದ್ದ ಟ್ರೂಪಿಂಗ್ ದಿ ಕಲರ್ ರಿಹರ್ಸಲ್ (Trooping the Colour rehearsal)ನಲ್ಲಿ ಭಾಗಿಯಾಗಿದ್ದ ಮೂವರು ಯೋಧರು ತಲೆ ತಿರುಗಿ ಬಿದ್ದಿರುವ ಘಟನೆ ಶನಿವಾರ ವರದಿಯಾಗಿದೆ. ಇಂಗ್ಲೆಂಡ್ನಲ್ಲಿ ಸುಮಾರು 30 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದು ಈ ವರ್ಷ ಇಲ್ಲಿ ದಾಖಲಾದ ಅತಿ ಹೆಚ್ಚಿನ ತಾಪಮಾನ ಎಂದು ಬ್ರಿಟಿಷ್ ಮಾಧ್ಯಮಗಳು ವರದಿ ಮಾಡಿವೆ. ರಿಹರ್ಸಲ್ ವೇಳೆ ಉಣ್ಣೆಯ ದಿರಿಸು ಮತ್ತು ಕರಡಿ ಚರ್ಮದ ಟೋಪಿಯನ್ನು ಯೋಧರು ಧರಿಸಿದ್ದರು.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಿನ್ಸ್ ವಿಲಿಯಂ, ಇಂದಿನ ಅತಿ ಹೆಚ್ಚು ತಾಪಮಾನದಲ್ಲೂ ಬೆಳಗ್ಗಿನ ರಿಹರ್ಸಲ್ನಲ್ಲಿ ಭಾಗವಹಿಸಿದ ಎಲ್ಲ ಯೋಧರಿಗೆ ಧನ್ಯವಾದ ಅರ್ಪಿಸುತ್ತೇನೆ. ಇಂತಹ ಕಷ್ಟದ ಪರಿಸ್ಥಿತಿಯಲ್ಲೂ ಚೆನ್ನಾಗಿ ನಿಭಾಯಿಸಿದ್ದೀರಿ. ಧನ್ಯವಾದ ಎಂದು ಹೇಳಿದ್ದಾರೆ. ಪ್ರಮುಖ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಾಡಿದ ಕಠಿಣ ಪರಿಶ್ರಮ ಮತ್ತು ಪರೇಡ್ನಲ್ಲಿ ಭಾಗವಹಿಸಿದವರಿಗೆ, ಅದರಲ್ಲೂ ಕಠಿಣ ವಾತಾವರಣದಲ್ಲಿ ಭಾಗವಹಿಸಿದರಿಗೆ ಇದರ ಯಶಸ್ಸು ಸಲ್ಲಿಕೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.