ನವದೆಹಲಿ: ಪಾಕಿಸ್ತಾನದಲ್ಲಿ ಸಿಂಧಿ ಸಮುದಾಯದವರನ್ನು ಸರ್ಕಾರಿ ಬೆಂಬಲಿತ ಏಜೆನ್ಸಿಗಳ ಸಿಬ್ಬಂದಿಗಳು ಅಪಹರಿಸಿ ಕಣ್ಮರೆಗೊಳಿಸುವ ವಿದ್ಯಮಾನಗಳನ್ನು ತಡೆಗಟ್ಟುವಂತೆ ಮತ್ತು ಕಣ್ಮರೆಯಾದವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಸ್ವತಂತ್ರ ಸಿಂಧು ದೇಶ್ ಬೇಡುತ್ತಿರುವ ವಿಶ್ವ ಸಿಂಧಿ ಕಾಂಗ್ರೆಸ್ ಸಂಘಟನೆಯು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರಿಗೆ ಮನವಿ ಸಲ್ಲಿಸಿದೆ.
ಸರ್ಕಾರಿ ಪ್ರಾಯೋಜಿತ ಕೃತ್ಯದ ನಿಮಿತ್ತ ಪಾಕಿಸ್ತಾನದ ಭದ್ರತಾ ಪಡೆಗಳು ಮತ್ತು ಬೇಹುಗಾರಿಕಾ ಸಂಸ್ಥೆಗಳ ಸಿಬ್ಬಂದಿಯು ಸಿಂಧಿ ಮತ್ತು ಬಲೂಚ್ ಜನರನ್ನು ಅಪಹರಣ ಮಾಡುತ್ತಿರುವ ವಿರುದ್ಧ ಸಿಂಧಿ ಮಾನವ ಹಕ್ಕುಗಳ ಪ್ರಚಾರಕರು ಲಂಡನ್‌ನಲ್ಲಿ ಪ್ರತಿಭಟನೆ ನಡೆಸಿದರು. ಪಾಕಿಸ್ತಾನದ ಭದ್ರತಾ ಪಡೆಗಳಿಂದ ಅಪಹರಣಕ್ಕೊಳಗಾಗಿ ಸಿಂಧ್‌ನಲ್ಲಿ ಕಾಣೆಯಾದ ನೂರಾರು ಜನರನ್ನು ಬಿಡುಗಡೆ ಮಾಡಬೇಕೆಂದು ಅವರು ಒತ್ತಾಯಿಸಿದರು.
ಬಲೂಚ್ ಸಹೋದರರಿಗೆ ಬೆಂಬಲದ ಅಗತ್ಯ ಇದೆ:ವಿವಿಧ ಸಮುದಾಯದ ಜನರನ್ನು ಬಲವಂತವಾಗಿ ನಾಪತ್ತೆಗೊಳಿಸುತ್ತಿರುವ ವಿಷಯದ ಬಗ್ಗೆ ಮಾತನಾಡಿದ ವಿಶ್ವ ಸಿಂಧಿ ಕಾಂಗ್ರೆಸ್ (ಡಬ್ಲ್ಯುಎಸ್‌ಸಿ) ಅಧ್ಯಕ್ಷೆ ರುಬಿನಾ ಶೇಖ್, ಈ ಗಂಭೀರ ವಿಚಾರದಲ್ಲಿ ನಾವು ನಮ್ಮ ಬಲೂಚ್ ಸಹೋದರರಿಗೆ ಬೆಂಬಲ ನೀಡಬೇಕಿದೆ. ಅಪಹರಣದ ವಿಷಯವು ಕೇವಲ ಮಾನವ ಹಕ್ಕುಗಳಿಗೆ ಸಂಬಂಧಿಸಿದ್ದಲ್ಲ. ಆದರೆ, ವಾಸ್ತವವಾಗಿ ಇದು ಪರಿಸರ ನ್ಯಾಯ ಮತ್ತು ಸಂಪನ್ಮೂಲಗಳಿಗೆ ಸಂಬಂಧಿಸಿದ್ದಾಗಿದೆ ಎಂದರು.
ಪಾಕಿಸ್ತಾನಕ್ಕೆ ಸ್ವಾತಂತ್ರ್ಯ ಸಿಕ್ಕಿತು ಎಂದು ಹೇಳಿದಾಗಿನಿಂದ ದೇಶದ ಬಲೂಚಿಸ್ತಾನ್ ಮತ್ತು ಸಿಂಧ್ ಹೀಗೆ ಎರಡೂ ಕಡೆಗಳಲ್ಲಿ ನೂರಾರು ಅಥವಾ ಸಾವಿರಾರು ಜನರು ಕಾಣೆಯಾಗಿದ್ದಾರೆ. ಆದರೆ ಈ ಎರಡೂ ಪ್ರಾಂತ್ಯಗಳು ಮುಂದೊಂದು ದಿನ ಸ್ವಾತಂತ್ರ್ಯ ಪಡೆಯಲಿವೆ ಎಂದು ಅವರು ಹೇಳಿದರು. ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿಶ್ವ ಸಿಂಧಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಲಖು ಲುಹಾನೊ, ಸಿಂಧ್‌ನಲ್ಲಿ ಕಾಣೆಯಾದ ಜನರು ತಾವು ಏಕಾಂಗಿ ಎಂದು ಭಾವಿಸಬೇಕಿಲ್ಲ. ನಾವು ಅವರೊಂದಿಗೆ ಇದ್ದೇವೆ ಎಂದರು. ಪಾಕಿಸ್ತಾನವು ಜನರನ್ನು ಅಪಹರಿಸುವುದನ್ನು ತಡೆಯಬೇಕೆಂದು ಅವರು ಜಗತ್ತಿಗೆ ಮನವಿ ಮಾಡಿದರು.