ಲಂಡನ್( ಯುಕೆ) : ಆಸ್ಪತ್ರೆಯೊಂದರಲ್ಲಿ ಏಳು ಶಿಶುಗಳ ಹತ್ಯೆ ಮಾಡಿದ ಮತ್ತು ಇತರ ಆರು ಮಕ್ಕಳನ್ನು ಹತ್ಯೆಗೆ ಯತ್ನಿಸಿದ ಬ್ರಿಟನ್ ನರ್ಸ್‌ಗೆ ಅಲ್ಲಿನ ನ್ಯಾಯಾಲಯವು ಸೋಮವಾರ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದೆ. "ನರ್ಸ್ ಲೂಸಿ ಲೆಟ್ಬಿ (33) ಓರ್ವ ಕ್ರೂರಿ ಎಂದು ಉಲ್ಲೇಖ ಮಾಡಿರುವ ನ್ಯಾಯಾಧೀಶರು, ಇನ್ನೆಂದು ಅಕೆಯ ಬಿಡುಗಡೆಗೆ ಅವಕಾಶವಿಲ್ಲ" ಎಂದು ಹೇಳಿದ್ದಾರೆ.
ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿರುವ ಉತ್ತರ ಇಂಗ್ಲೆಂಡ್‌ನಲ್ಲಿರುವ ಮ್ಯಾಂಚೆಸ್ಟರ್ ಕ್ರೌನ್ ಕೋರ್ಟ್‌ನ ಜಸ್ಟಿಸ್ ಜೇಮ್ಸ್ ಗಾಸ್, ಭವಿಷ್ಯದಲ್ಲಿ ಲೂಸಿ ಲೆಟ್ಬಿಯನ್ನು ಜೈಲಿನಿಂದ ಯಾವತ್ತೂ ಬಿಡುಗಡೆ ಮಾಡಲಾಗದು. ಜೈಲಿನಿಂದ ಹೊರಗಡೆ ಬಂದು ಬದುಕಲು ಲೂಸಿ ಯೋಗ್ಯಳಲ್ಲ. ತನ್ನ ಉಳಿದ ಜೀವನವನ್ನು ಜೈಲಿನಲ್ಲಿ ಕಳೆಯಬೇಕು. ಬ್ರಿಟಿಷ್ ಕಾನೂನಿನಡಿ ಇದು ಅತ್ಯಂತ ಕಠಿಣ ಶಿಕ್ಷೆ ಎಂದು ಅವರು ಹೇಳಿದ್ದಾರೆ. ಮಕ್ಕಳ ಸರಣಿ ಕೊಲೆ ಮತ್ತು ಆಕೆಯ ಎಲ್ಲೆ ಮೀರಿದ ಕ್ರೂರತೆಯ ಬಗ್ಗೆ ಕಳೆದ 22 ದಿನಗಳಿಂದ ವಾದ ಮತ್ತು ಪ್ರತಿವಾದ ಆಲಿಸಿದ ಮ್ಯಾಂಚೆಸ್ಟರ್ ಕೋರ್ಟ್, ಶುಕ್ರವಾರವಷ್ಟೇ ಅಕೆಯನ್ನು ತಪ್ಪಿತಸ್ಥೆ ಎಂದು ಘೋಷಿಸಿತ್ತು. ಅಲ್ಲದೇ ಮಕ್ಕಳನ್ನು ಕಳೆದುಕೊಂಡ ಪೋಷಕರ ಬಗ್ಗೆ ನ್ಯಾಯಾಲಯ ಕಳವಳ ವ್ಯಕ್ತಪಡಿಸಿತ್ತು.
ಅಪರಾಧಿ ಎಂದು ಘೋಷಿಸಿದ ಬಳಿಕ ನ್ಯಾಯಾಲಯಕ್ಕೆ ಹಾಜರಾಗಲು ನಿರಾಕರಿಸಿದ ಲೂಸಿ ಲೆಟ್ಬಿಗೆ ಸೋಮವಾರ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದೆ. ಈ ಕ್ರೂರ ಅಪರಾಧಕ್ಕೆ ಕ್ಷಮೆ ಇಲ್ಲ. ಲೂಸಿ ಲೆಟ್ಬಿ ಸಾಯುವವರೆಗೂ ಜೈಲಿನಲ್ಲೇ ಕೊಳೆಯಬೇಕು. ಇದನ್ನು ಬಿಟ್ಟು ಅಪರಾಧಿಗೆ ಇನ್ಯಾವುದೇ ಅವಕಾಶವಿಲ್ಲ. ಎಲ್ಲ ಬಾಗಿಲುಗಳು ಮುಚ್ಚಿಕೊಂಡಿವೆ. ಇನ್ನೆಂದಿಗೂ ಬಿಡುಗಡೆ ಅನ್ನೋದೇ ಲೂಸಿ ಲೆಟ್ಬಿಗೆ ಇಲ್ಲ ಎಂದು ನ್ಯಾಯಾಲಯವು ಹೇಳಿದೆ. ಬ್ರಿಟಿಷ್ ಕಾನೂನಿನಡಿ ಈವರೆಗೆ ಕೇವಲ ಮೂವರು ಮಹಿಳೆಯರು ಮಾತ್ರ ಇಂತಹ ಕಠಿಣ ಶಿಕ್ಷೆಗೆ ಗುರಿಯಾಗಿದ್ದಾರೆ ಅನ್ನೋದು ಗಮನಿಸಬೇಕಾದ ಸಂಗತಿ. ಲೆಟ್ಬಿ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಖಂಡಿಸಿದ್ದಾರೆ.
ಇದನ್ನೂ ಓದಿ:"ನಾನು ದೆವ್ವ": ಒಂದೇ ವರ್ಷದಲ್ಲಿ ಏಳು ನವಜಾತ ಶಿಶುಗಳನ್ನು ಕೊಂದ ಬ್ರಿಟಿಷ್ ನರ್ಸ್
2015 ರ ಜೂನ್ ರಿಂದ 2016 ರ ಜೂನ್ ನಡುವೆ ವಾಯವ್ಯ ಇಂಗ್ಲೆಂಡ್‌ನ ಕೌಂಟೆಸ್ ಆಫ್ ಚೆಸ್ಟರ್ ಆಸ್ಪತ್ರೆಯಲ್ಲಿ ಮಕ್ಕಳ ನಿಗೂಢ ಕೊಲೆಗಳು ನಡೆದಿದ್ದವು. ನಾನಾ ಕಾರಣಗಳಿಗಾಗಿ ಲೂಸಿ ಲೆಟ್ಬಿಯೇ ಈ ಕೊಲೆಗಳನ್ನು ಮಾಡಿರುವುದಾಗಿ ಅನುಮಾನ ವ್ಯಕ್ತವಾಗಿತ್ತು. ಅನುಮಾನದ ಹಿನ್ನೆಲೆಯಲ್ಲಿ ಆಕೆಯನ್ನು ಕರೆದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಭಾರತೀಯ ಮೂಲದ ವೈದ್ಯ ರವಿ ಜಯರಾಂ ಸೇರಿದಂತೆ ಇತರ ವೈದ್ಯರು ನೀಡಿದ ದೂರಿನ ನಂತರ ಈ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಕಳೆದ ಒಂದು ವರ್ಷದಲ್ಲಿ 7 ನವಜಾತ ಶಿಶುಗಳನ್ನು ಕೊಂದು ಇತರ ಆರು ಮಕ್ಕಳನ್ನು ಕೊಲ್ಲಲು ಯತ್ನಿಸಿದ್ದಳು. ಮ್ಯಾಂಚೆಸ್ಟರ್ ಕ್ರೌನ್ ನ್ಯಾಯಾಲಯವು ಶುಕ್ರವಾರ ತಪ್ಪಿತಸ್ಥೆ ಎಂದು ಪರಿಗಣಿಸಲಾಗಿತ್ತು.