ಲುಡೆನ್ಶೈಡ್ (ಜರ್ಮನಿ):ಸುರಕ್ಷತಾ ಕಾರಣಗಳಿಗಾಗಿ 1968ರಲ್ಲಿ ನಿರ್ಮಿಸಿಲಾಗಿದ್ದ ಜರ್ಮನಿಯ ಬೃಹತ್ ಸೇತುವೆಯನ್ನು 150 ಕೆಜಿ ನಿಯಂತ್ರಿತ ಸ್ಫೋಟಕಗಳನ್ನು ಬಳಸಿ ಕೆಡವಲಾಗಿದೆ. ಜರ್ಮನಿಯ ಲುಡೆನ್ಶೈಡ್ನಲ್ಲಿರುವ ರಹ್ಮೆಡ್ ವ್ಯಾಲಿ ಸೇತುವೆಯು ಶಿಥಿಲಗೊಂಡು ಬಿರುಕು ಬಿಟ್ಟಿದ್ದರಿಂದ 2021ರಿಂದ ಸೇತುವೆ ಮೇಲೆ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.
ಬೃಹಧಾಕಾರದ ಸೇತುವೆಯನ್ನು ಕೆಳಗೆ ಉರಳಿಸಲು ಸುಮಾರು 330 ಪೌಂಡ್ (150 ಕೆಜಿ) ಸ್ಫೋಟಕಗಳನ್ನು ಬಳಸಲಾಗಿದೆ ಮತ್ತು ಸೇತುವೆ ಸುತ್ತಲಿನ ಪ್ರದೇಶದಲ್ಲಿ ವಾಸಿಸುತ್ತಿರುವ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಾರ್ವಜನಿಕರು ಸುರಕ್ಷಿತ ಪ್ರದೇಶದಲ್ಲಿ ನಿಂತು ತಮ್ಮ ಮೊಬೈಲ್ಗಳಲ್ಲಿ ಬೀಳುತ್ತಿರುವ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಸುಮಾರು 453 ಮೀ. ಉದ್ದ, 70 ಮೀಟರ್ ಎತ್ತರ ಮತ್ತು 17,000 ಟನ್ ತೂಕದ ಸೇತುವೆಯು ಕೆಲವೇ ಸೆಕೆಂಡುಗಳಲ್ಲಿ ನೆಲಕ್ಕುರುಳುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.