ದಕ್ಷಿಣ ಕೆರೊಲಿನ್ (ಅಮೆರಿಕ):ನವ ವಿವಾಹಿತ ದಂಪತಿ ತಮ್ಮ ಆರತಕ್ಷತೆ ಮುಗಿಸಿಕೊಂಡು ಗಾಲ್ಫ್ ಕಾರ್ಟ್ ವಾಹನದಲ್ಲಿ ಹೊರಡುತ್ತಿರುವಾಗ ಕುಡುಕ ಚಾಲಕನೊಬ್ಬ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ವಧು ಸಾವನ್ನಪ್ಪಿರುವ ಘಟನೆ ಅಮೆರಿಕದ ದಕ್ಷಿಣ ಕೆರೊಲಿನಾದಲ್ಲಿ ಸಂಭವಿಸಿದೆ. ವರ ಆರಿಕ್ ಹಚಿನ್ಸನ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತ ವಧುವನ್ನು ಸಮಂತಾ (34) ಎಂದು ಗುರುತಿಸಲಾಗಿದೆ. ಈ ದುರಂತ ಘಟನೆಯ ಬಗ್ಗೆ ಗೋ ಫಂಡ್ ಮಿ (goFundMe) ಪುಟದ ಮೂಲಕ ವರನ ತಾಯಿ ನವದಂಪತಿಯ ಫೋಟೋವನ್ನು ಪೋಸ್ಟ್ ಮಾಡಿ ಘಟನೆಯ ಬಗ್ಗೆ ವಿವರವನ್ನು ನೀಡಿ ಚಿಕಿತ್ಸೆಗೆ ಹಣದ ಸಹಾಯವನ್ನು ಕೇಳಿದ್ದಾರೆ. ಪುಟದಲ್ಲಿ ಉಲ್ಲೇಖಿಸಿರುವ ಪ್ರಕಾರ, "ನವದಂಪತಿ ತಮ್ಮ ಆರತಕ್ಷತೆಯ ಕಾರ್ಯಕ್ರಮವನ್ನು ಮುಗಿಸಿಕೊಂಡು ಗಾಲ್ಫ್ ಕಾರ್ಟ್ ವಾಹನದಲ್ಲಿ ಹೋಗುತ್ತಿರುವ ಸಂದರ್ಭದಲ್ಲಿ ಕುಡಿದು ಗಾಡಿ ಓಡಿಸಿಕೊಂಡು ಬರುತ್ತಿದ್ದ ವ್ಯಕ್ತಿ ಹಿಂದಿನಿಂದ ಬಂದು ನವವಿವಾಹಿತರಿದ್ದ ವಾಹನಕ್ಕೆ ರಭಸವಾಗಿ ಡಿಕ್ಕಿ ಹೊಡೆದಿದ್ದಾನೆ. ಇದರ ಪರಣಾಮ ಸ್ಥಳದಲ್ಲೇ ವಧು ಸಾವನ್ನಪ್ಪಿದ್ದಾಳೆ. ವಾಹನ ಡಿಕ್ಕಿ ಹೊಡೆದ ರಭಸಕ್ಕೆ ದಂಪತಿಗಳಿದ್ದ ವಾಹನವು ಸ್ವಲ್ಪ ದೂರ ಉರುಳುತ್ತ ಹೋಗಿದೆ'' ಎಂದು ಹೇಳಿದ್ದಾರೆ.
ವರನ ತಲೆಗೆ ಪೆಟ್ಟು ಬಿದ್ದಿದೆ ಮತ್ತು ಹಲವಾರು ಮೂಳೆಗಳು ಮುರಿದಿವೆ. ವರ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಿದೆ. ಇದಕ್ಕೆ ಸಾಕಷ್ಟು ಹಣ ಬೇಕಾಗಿದ್ದು, ಗೋ ಫಂಡ್ ಮಿ ಪುಟದ ಮೂಲಕ ವರನ ತಾಯಿ ಸಹಾಯದ ಹಸ್ತವನ್ನು ಚಾಚಿದ್ದಾರೆ. ಈ ಘಟನೆಯಲ್ಲಿ ದಂಪತಿಯ ಜೊತೆ ಇದ್ದ ಸ್ನೇಹಿತರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.