ಜೋಹಾನ್ಸ್‌ಬರ್ಗ್: ಜಗತ್ತಿನ ಪ್ರಮುಖ ರಾಷ್ಟ್ರಗಳ ಗುಂಪುಗಳಲ್ಲಿ ಒಂದಾದ ಬ್ರಿಕ್ಸ್ (BRICS) ವಿಸ್ತರಣೆಗೆ ನಿರ್ಧರಿಸಲಾಗಿದೆ. ಅರ್ಜೆಂಟಿನಾ, ಈಜಿಪ್ಟ್, ಇಥಿಯೋಪಿಯಾ, ಇರಾನ್, ಸೌದಿ ಅರೇಬಿಯಾ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅನ್ನು ಹೊಸ ಸದಸ್ಯ ರಾಷ್ಟ್ರಗಳನ್ನಾಗಿ ಸೇರಿಸಿಕೊಳ್ಳಲು ಬ್ರಿಕ್ಸ್ ರಾಷ್ಟ್ರಗಳ ನಾಯಕರು ಸಮ್ಮತಿಸಿದ್ದಾರೆ. ಈ ಮೂಲಕ ಸುದೀರ್ಘ ಪ್ರಕ್ರಿಯೆಗೆ ಮುದ್ರೆಯೊತ್ತಿದ್ದಾರೆ.
ಬ್ರಿಕ್ಸ್ ಗುಂಪಿನಲ್ಲಿ ಪ್ರಸ್ತುತ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ರಾಷ್ಟ್ರಗಳಿವೆ. 2019ರ ನಂತರ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ಬ್ರಿಕ್ಸ್ ಶೃಂಗಸಭೆ ನಡೆಯುತ್ತಿದೆ. ಜೋಹಾನ್ಸ್‌ಬರ್ಗ್‌ನಲ್ಲಿ ಗುರುವಾರ ಪ್ರಧಾನಿ ನರೇಂದ್ರ ಮೋದಿ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಅವರೊಂದಿಗೆ ಜಂಟಿ ಮಾಧ್ಯಮಗೋಷ್ಠಿಯಲ್ಲಿ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರು ಹೊಸ ರಾಷ್ಟ್ರಗಳ ಸೇರ್ಪಡೆ ಕುರಿತ ಮಹತ್ವದ ನಿರ್ಧಾರವನ್ನು ಪ್ರಕಟಿಸಿದರು.
''ಹೊಸ ಸದಸ್ಯ ರಾಷ್ಟ್ರಗಳು 2024ರ ಜನವರಿ 1ರಿಂದಲೇ ಜಾರಿಗೆ ಬರುವಂತೆ ಬ್ರಿಕ್ಸ್‌ನ ಭಾಗವಾಗುತ್ತಾರೆ'' ಎಂದೂ ಘೋಷಿಸಿದ ರಮಾಫೋಸಾ, ''ಈ ವಿಸ್ತರಣೆ ಪ್ರಕ್ರಿಯೆಗೆ ಮಾರ್ಗದರ್ಶಿ ಸೂತ್ರಗಳು, ಮಾನದಂಡಗಳು ಮತ್ತು ಕಾರ್ಯವಿಧಾನಗಳನ್ನು ದೃಢಪಡಿಸಿದ ನಂತರ ಹೊಸ ಸದಸ್ಯರ ನಿರ್ಧಾರಕ್ಕೆ ಒಪ್ಪಿಗೆ ನೀಡಲಾಗಿದೆ'' ಎಂದು ತಿಳಿಸಿದರು.
"ಈ ಬ್ರಿಕ್ಸ್ ವಿಸ್ತರಣೆ ಪ್ರಕ್ರಿಯೆಯ ಮೊದಲ ಹಂತದ ಬಗ್ಗೆ ನಾವು ಒಮ್ಮತವನ್ನು ಹೊಂದಿದ್ದೇವೆ. ಅರ್ಜೆಂಟಿನಾ, ಈಜಿಪ್ಟ್, ಇಥಿಯೋಪಿಯಾ, ಇರಾನ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ಗಳನ್ನು ಬ್ರಿಕ್ಸ್‌ನ ಪೂರ್ಣ ಸದಸ್ಯತ್ವಕ್ಕೆ ಆಹ್ವಾನಿಸಲು ನಿರ್ಧರಿಸಿದ್ದೇವೆ. ನಾವು ಬ್ರಿಕ್ಸ್‌ನೊಂದಿಗೆ ಪಾಲುದಾರಿಕೆಯನ್ನು ನಿರ್ಮಿಸುವಲ್ಲಿ ಇತರ ದೇಶಗಳ ಹಿತಾಸಕ್ತಿಗಳನ್ನು ಗೌರವಿಸುತ್ತೇವೆ. ಬ್ರಿಕ್ಸ್ ಪಾಲುದಾರಿಕೆ ಮಾದರಿ ಮತ್ತು ನಿರೀಕ್ಷಿತ ದೇಶಗಳ ಪಟ್ಟಿಯನ್ನು (ಗುಂಪಿಗೆ ಸೇರಲು ಬಯಸುವ ರಾಷ್ಟ್ರಗಳು) ಇನ್ನಷ್ಟು ಅಭಿವೃದ್ಧಿಪಡಿಸಲು ನಮ್ಮ ವಿದೇಶಾಂಗ ಮಂತ್ರಿಗಳಿಗೆ ವಹಿಸಿದ್ದೇವೆ" ಎಂದು ರಮಾಫೋಸಾ ಮಾಹಿತಿ ನೀಡಿದರು.
ಜಾಗತಿಕ ಸಂಸ್ಥೆಗಳಿಗೆ ಸಂದೇಶ - ಪ್ರಧಾನಿ ಮೋದಿ:ಬ್ರಿಕ್ಸ್‌ನ ಹೊಸ ಸದಸ್ಯ ರಾಷ್ಟ್ರಗಳಾಗಿ ಆರು ದೇಶಗಳನ್ನು ಒಪ್ಪಿಕೊಳ್ಳಲು ನಿರ್ಧಾರ ಕುರಿತ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ''ಸಮೂಹದ ಆಧುನೀಕರಣ ಹಾಗೂ ವಿಸ್ತರಣೆಯು ಬದಲಾಗುತ್ತಿರುವ ಕಾಲಕ್ಕೆ ಅನುಗುಣವಾಗಿ ಎಲ್ಲ ಜಾಗತಿಕ ಸಂಸ್ಥೆಗಳು ರೂಪಾಂತರಗೊಳ್ಳಬೇಕಾದ ಸಂದೇಶವಾಗಿದೆ'' ಎಂದು ತಿಳಿಸಿದರು.
ಬ್ರಿಕ್ಸ್ ನಾಯಕರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಧಾನಿ, ''ಅರ್ಜೆಂಟಿನಾ, ಈಜಿಪ್ಟ್, ಇಥಿಯೋಪಿಯಾ, ಇರಾನ್, ಸೌದಿ ಅರೇಬಿಯಾ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ ಅನ್ನು ಹೊಸ ಸದಸ್ಯ ರಾಷ್ಟ್ರಗಳನ್ನಾಗಿ ಒಪ್ಪಿಕೊಂಡಿರುವುದು ಗುಂಪಿಗೆ ಹೊಸ ಶಕ್ತಿ ಮತ್ತು ದಿಸೆ ನೀಡುತ್ತದೆ. ಸಮೂಹವನ್ನು ವಿಸ್ತರಿಸುವ ನಿರ್ಧಾರವು ಬಹುಧ್ರುವೀಯ ಜಗತ್ತಿನಲ್ಲಿ ಅನೇಕ ದೇಶಗಳ ನಂಬಿಕೆಯನ್ನು ಇನ್ನಷ್ಟು ಬಲಪಡಿಸುತ್ತದೆ'' ಎಂದು ಹೇಳಿದರು.
''ಭಾರತವು ಬ್ರಿಕ್ಸ್‌ನ ವಿಸ್ತರಣೆಯನ್ನು ಯಾವಾಗಲೂ ಸಂಪೂರ್ಣವಾಗಿ ಬೆಂಬಲಿಸುತ್ತದೆ. ನಮ್ಮ ತಂಡಗಳು ಬ್ರಿಕ್ಸ್‌ನ ವಿಸ್ತರಣೆಗಾಗಿ ಮಾರ್ಗದರ್ಶಿ ಸೂತ್ರಗಳು, ಮಾನದಂಡಗಳು, ಮಾನದಂಡಗಳು ಮತ್ತು ಕಾರ್ಯವಿಧಾನಗಳನ್ನು ಒಟ್ಟಿಗೆ ಒಪ್ಪಿಕೊಂಡಿರುವುದಕ್ಕೆ ನನಗೆ ಸಂತೋಷವಾಗಿದೆ. ಭಾರತವು ಎಲ್ಲ ರಾಷ್ಟ್ರಗಳೊಂದಿಗೆ ಅತ್ಯಂತ ಗಾಢ ಮತ್ತು ಐತಿಹಾಸಿಕ ಸಂಬಂಧ ಹೊಂದಿದೆ'' ಎಂದು ತಿಳಿಸಿದರು. ಇದೇ ವೇಳೆ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ತಮ್ಮ ಮಾಧ್ಯಮ ಹೇಳಿಕೆ ನೀಡಿದರು.
ಪ್ರಧಾನಿ ಮೋದಿ ಟ್ವೀಟ್: 'ಬ್ರಿಕ್ಸ್ ಶೃಂಗಸಭೆಯ 15 ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ನಾವು ಈ ಗುಂಪನ್ನು ವಿಸ್ತರಣೆ ಮಾಡಲು ನಿರ್ಧಾರ ತೆಗೆದುಕೊಂಡಿದ್ದೇವೆ. ಈ ವಿಸ್ತರಣೆಗೆ ಭಾರತ ಯಾವಾಗಲೂ ಬೆಂಬಲ ನೀಡಿದೆ. ಈ ರೀತಿಯ ವಿಸ್ತರಣೆಗಳು ಬ್ರಿಕ್ಸ್ ಅನ್ನು ಮತ್ತಷ್ಟು ಶಕ್ತಿಯುತ ಮತ್ತು ಪರಿಣಾಮಕಾರಿಯನ್ನಾಗಿ ರೂಪಿಸುತ್ತದೆ. ಈ ಉತ್ಸಾಹದಲ್ಲಿ ಭಾರತವು, ಅರ್ಜೆಂಟಿನಾ, ಈಜಿಪ್ಟ್, ಇಥಿಯೋಪಿಯಾ, ಇರಾನ್, ಸೌದಿ ಅರೇಬಿಯಾ ಮತ್ತು ಯುಎಇ ದೇಶಗಳನ್ನು ಬ್ರಿಕ್ಸ್ ಕುಟುಂಬಕ್ಕೆ ಸ್ವಾಗತಿಸುತ್ತದೆ' ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. (ಪಿಟಿಐ)
ಇದನ್ನೂ ಓದಿ:ಚಂದ್ರಯಾನ-3 ಮಿಷನ್ ಯಶಸ್ಸು ಶ್ಲಾಘಿಸಲು ರವೀಂದ್ರನಾಥ ಟ್ಯಾಗೋರ್ರನ್ನ ಉಲ್ಲೇಖಿಸಿದ ಆಫ್ರಿಕಾದ ಅಧ್ಯಕ್ಷರು!