ಸಾಯೊ ಪೌಲೊ (ಬ್ರೆಜಿಲ್):ವಿಶ್ವವನ್ನೇ ನಡುಗಿಸುತ್ತಿರುವ ಕೊರೊನಾ ವೈರಸ್ ಮತ್ತೆ ತನ್ನ ಪ್ರತಾಪ ತೋರಿಸುತ್ತಿದೆ. ಲಸಿಕಾಕರಣ ಅಭಿಯಾನ ನಡೆಸಿ ಅದರ ತಡೆಗೆ ಸರ್ಕಾರಗಳು ಪ್ರಯತ್ನ ನಡೆಸುತ್ತಿವೆ. ಕೆಲವೆಡೆ ಲಸಿಕೆಯ ಬಗೆಗಿನ ಅಸಡ್ಡೆಯಿಂದಾಗಿ ಸಾವು-ನೋವುಗಳು ಹೆಚ್ಚಿವೆ. ಅದರಲ್ಲಿ ಅಮೆರಿಕ ಮತ್ತು ಬ್ರೆಜಿಲ್ ಮೊದಲೆರಡು ಸ್ಥಾನಗಳಲ್ಲಿವೆ. ಅಮೆರಿಕದಲ್ಲಿ 11 ಲಕ್ಷಕ್ಕೂ ಅಧಿಕ ಜನರು ಕೋವಿಡ್ಗೆ ತುತ್ತಾದರೆ, 7 ಲಕ್ಷ ಮಂದಿ ಬ್ರೆಜಿಲ್ನಲ್ಲಿ ಸಾವನ್ನಪ್ಪಿದ್ದಾರೆ. ಇದು ವಿಶ್ವದಲ್ಲಿಯೇ ಅತಿಹೆಚ್ಚು.
ಬ್ರೆಜಿಲ್ನಲ್ಲಿ ಕೋವಿಡ್ ಸಾವುಗಳು ಏರಿಕೆ ಗತಿಯಲ್ಲಿವೆ. ಇದಕ್ಕೆ ಕಾರಣ ಕೊರೊನಾ ಲಸಿಕೆ ಹಾಕಿಸದೇ ಇರುವುದು ಮತ್ತು ವಿವಿಧ ರೀತಿಯ ಕಾಯಿಲೆಗಳು ಅಲ್ಲಿನ ಜನರನ್ನು ಬಾಧಿಸುತ್ತಿರುವುದು. ಅಮೆರಿಕದ ಬಳಿಕ ವಿಶ್ವದಲ್ಲಿಯೇ ಅತಿಹೆಚ್ಚು ಕೋವಿಡ್ ಸಾವಾಗಿದ್ದು ಬ್ರೆಜಿಲ್ನಲ್ಲಿ 7 ಲಕ್ಷಕ್ಕೂ ಅಧಿಕ ಮಂದಿ ಕೊರೊನಾಗೆ ತುತ್ತಾಗಿದ್ದಾರೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
"ಇತ್ತೀಚಿನ ದಿನಗಳಲ್ಲಿ ಕೋವಿಡ್-19 ನಿಂದ ಸಾಯುತ್ತಿರುವ ಹೆಚ್ಚಿನ ಜನರು ಲಸಿಕೆ ಹಾಕಿಸಿಕೊಂಡಿಲ್ಲ ಅಥವಾ ಇತರ ಭೀಕರ ಕಾಯಿಲೆಗಳಿಂದ ಬಳಲುತ್ತಿದ್ದವರಾಗಿದ್ದಾರೆ" ಎಂದು ಬ್ರೆಜಿಲಿಯನ್ ಆರೋಗ್ಯ ತಜ್ಞರು ತಿಳಿಸಿದ್ದಾರೆ. ದೇಶದ ಪ್ರತಿಯೊಂದು ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಲಭ್ಯವಿದೆ. ಸಾಂಕ್ರಾಮಿಕ ರೋಗ ತಡೆಗೆ ಜನರು ಅದನ್ನು ಪಡೆಯಬೇಕು ಎಂದು ಸರ್ಕಾರ ಕೋರಿದೆ.
ಕೊರೊನಾ ಲಸಿಕೆ ಪಡೆಯುವುದರಿಂದ ತಮ್ಮವರನ್ನು ಕಳೆದುಕೊಂಡ ಕುಟುಂಬದ ರಕ್ಷಣೆಗೆ ಇದು ನೆರವಾಗಲಿದೆ. ಕೊರೊನಾ ವೈರಸ್ ಇತರೆ ವ್ಯಾಧಿಗಳ ಮೇಲೆ ಪರಿಣಾಮ ಬೀರಿ ಸಾವು ತರುತ್ತಿದೆ. ಇದಕ್ಕಿರುವ ಮಾರ್ಗ ಲಸಿಕೆ ಸ್ವೀಕಾರ ಎಂದು ಸರ್ಕಾರ ಹೇಳಿದೆ.