ಲಂಡನ್, ಬ್ರಿಟನ್:ಇದೀಗ ಲಿಜ್ ಟ್ರಸ್ ರಾಜೀನಾಮೆ ಬಳಿಕ ಬ್ರಿಟನ್ ಮತ್ತೆ ಅದೇ ಕವಲುದಾರಿಯಲ್ಲಿ ನಿಂತಿದ್ದು, ಮುಂದಿನ ಪ್ರಧಾನಿ ಯಾರು ಎಂಬುದೇ ಅದರ ಮುಂದಿರುವ ಪ್ರಶ್ನೆ. ಪ್ರಸ್ತುತ, ಭಾರತೀಯ ಮೂಲದ ರಿಷಿ ಸುನಕ್ ಮತ್ತೆ ಯುಕೆ ಪ್ರಧಾನಿಯಾಗುವ ರೇಸ್‌ನಲ್ಲಿದ್ದಾರೆ. ಲಿಜ್ ಟ್ರಸ್ ಅವರ ರಾಜೀನಾಮೆಯು ಸುನಕ್‌ಗೆ ಸುವರ್ಣಾವಕಾಶದಂತಿರಬಹುದು. ಆದರೆ, ಅವರ ಹಾದಿಯು ಅವರಿಗೆ ಅಷ್ಟೊಂದು ಸುಲಭವಾಗಿಲ್ಲ. ಏಕೆಂದರೆ ಅವರ ಜೊತೆಗೆ ಕನ್ಸರ್ವೇಟಿವ್ ಪಕ್ಷದ ಇತರ ಹಲವು ಮುಖಗಳೂ ಈ ರೇಸ್‌ನಲ್ಲಿದ್ದಾರೆ.
ಬ್ರಿಟಿಷ್ ಮಾಧ್ಯಮಗಳ ಪ್ರಕಾರ, ಪ್ರಧಾನಿ ಓಟದಲ್ಲಿ ಹಲವು ಮುಖಗಳಿವೆ. ಮೊದಲ ಹೆಸರು ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಅವರದ್ದು. ಇದಾದ ಬಳಿಕ ಭಾರತೀಯ ಮೂಲದ ರಿಷಿ ಸುನಕ್‌ಗೆ ಚಾನ್ಸ್ ಇದೆ. ಇದಲ್ಲದೇ ಪೆನ್ನಿ ಮೊರ್ಡಾಂಟ್ ಕೂಡ ಈ ರೇಸ್‌ನಲ್ಲಿದ್ದಾರೆ. ಲಿಜ್ ಟ್ರಸ್ ಆಯ್ಕೆಯಾದಾಗ ಅವರು ಪ್ರಧಾನಮಂತ್ರಿ ಸ್ಪರ್ಧೆಯಲ್ಲಿ ಮೂರನೇ ಸ್ಥಾನದಲ್ಲಿದ್ದರು. ಇವರ ಹೊರತಾಗಿ ರಕ್ಷಣಾ ಕಾರ್ಯದರ್ಶಿ ಬೆನ್ ವ್ಯಾಲೇಸ್, ಅಂತಾರಾಷ್ಟ್ರೀಯ ವ್ಯಾಪಾರ ಕಾರ್ಯದರ್ಶಿ ಕೆಮಿ ಬಡೆನೋಚ್, ವಿದೇಶಾಂಗ ಕಾರ್ಯದರ್ಶಿ ಜೇಮ್ಸ್ ಕ್ಲೆವರ್ಲಿ ಮತ್ತು ಇತ್ತೀಚೆಗೆ ರಾಜೀನಾಮೆ ನೀಡಿದ ಸುಯೆಲ್ಲಾ ಬ್ರಾವರ್‌ಮನ್ ಪ್ರಧಾನಿ ಹುದ್ದೆಯ ರೇಸ್‌ನಲ್ಲಿದ್ದಾರೆ.
ಈ ಪಟ್ಟಿಯಲ್ಲಿ ಹಣಕಾಸು ಸಚಿವ ಜೆರೆಮಿ ಹಂಟ್ ಹೆಸರೂ ಕೂಡಾ ಇದೆ. ಆದರೆ ಲಿಜ್ ಟ್ರಸ್ ರಾಜೀನಾಮೆ ನೀಡಿದ ನಂತರ ತಾನು ಇನ್ನು ಮುಂದೆ ಪ್ರಧಾನಿಯಾಗುವ ಹಕ್ಕು ಮಂಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಟಾಮ್ ತುಗೆಂಧತ್ ಮತ್ತು ಮೈಕೆಲ್ ಗೋವ್ ಕೂಡ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂಬುದು ಗಮನಾರ್ಹ.
ಮೂವರು ಅಭ್ಯರ್ಥಿಗಳ ನಡುವೆ ಸ್ಪರ್ಧೆ: ಬ್ರಿಟನ್ ಪ್ರಧಾನಿ ರೇಸ್‌ನಲ್ಲಿ 7 ಹೆಸರುಗಳಿವೆ. ಆದರೆ ಮೂರಕ್ಕಿಂತ ಹೆಚ್ಚು ಅಭ್ಯರ್ಥಿಗಳು ನಿಲ್ಲುವುದು ಕಷ್ಟ. ವಾಸ್ತವವಾಗಿ, ಬ್ರಿಟಿಷ್ ಸಂಸತ್ತಿನಲ್ಲಿ ಒಟ್ಟು 357 ಟೋರಿ ಸಂಸದರು (ಕನ್ಸರ್ವೇಟಿವ್ ಪಕ್ಷದ ಸಂಸದರು) ಇದ್ದಾರೆ. ಮತ ಪತ್ರವನ್ನು ಸ್ವೀಕರಿಸಲು ಅಭ್ಯರ್ಥಿಗೆ ಸುಮಾರು 100 ಟೋರಿ ಸಂಸದರ ಬೆಂಬಲ ಬೇಕಾಗುತ್ತದೆ. ಈ ರೀತಿಯಾಗಿ ಅಭ್ಯರ್ಥಿಗಳ ಸಂಖ್ಯೆ ಮೂರನ್ನು ಮೀರುವಂತಿಲ್ಲ.
ಭಾರತ ಮೂಲದ ರಿಷಿ ಸುನಕ್‌ಗೆ ಚಾನ್ಸ್:ಟ್ರಸ್ ರಾಜೀನಾಮೆ ನಂತರ ಮಾಜಿ ಚಾನ್ಸೆಲರ್ ರಿಷಿ ಸುನಕ್ ಮತ್ತೆ ಬ್ರಿಟನ್‌ನ ಪ್ರಧಾನಿಯಾಗುವ ಅವಕಾಶವನ್ನು ಹೊಂದಿದ್ದಾರೆ. ಭಾರತೀಯ ಮೂಲದ ಸುನಕ್ ಅವರು ಪ್ರಸಿದ್ಧ ಐಟಿ ಕಂಪನಿ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ. ಅವರು ಬ್ರಿಟನ್‌ನ ಹಣಕಾಸು ಸಚಿವರೂ ಆಗಿದ್ದಾರೆ. 2015ರಲ್ಲಿ ರಿಷಿ ಸುನಕ್ ಮೊದಲ ಬಾರಿಗೆ ಸಂಸದರಾದಾಗ ಭಗವದ್ಗೀತೆಯ ಮೇಲೆ ಕೈಯಿಟ್ಟು ಪ್ರಮಾಣ ವಚನ ಸ್ವೀಕರಿಸಿದರು. ರಿಷಿ ಸುನಕ್ ಗೆದ್ದರೆ, ಅವರು ಯುಕೆ ಪ್ರಧಾನಿಯಾದ ಮೊದಲ ಭಾರತೀಯ ಮೂಲದ ವ್ಯಕ್ತಿಯಾಗುತ್ತಾರೆ. ಇದು ಐತಿಹಾಸಿಕ ಕ್ಷಣವಾಗಿದೆ.