ನ್ಯೂಯಾರ್ಕ್ (ಅಮೆರಿಕ): ಅಮೆರಿಕದಲ್ಲಿ ಜನವರಿಯಲ್ಲಿ ಪೊಲೀಸ್ ಗಸ್ತು ಕಾರು ಡಿಕ್ಕಿ ಹೊಡೆದು ಮೃತಪಟ್ಟ ಭಾರತೀಯ ವಿದ್ಯಾರ್ಥಿನಿ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಈ ಸಾವಿನ ನಂತರ ಪೊಲೀಸ್ ಅಧಿಕಾರಿಯೊಬ್ಬರು ಫೋನ್ನಲ್ಲಿ ನಗುತ್ತಾ ಮಾತನಾಡಿದ ಹಾಗೂ ಜೋಕ್ ಮಾಡುತ್ತಿರುವ ದೃಶ್ಯಗಳು ಬೆಳಕಿಗೆ ಬಂದಿವೆ. ಹೀಗಾಗಿ ಅಧಿಕಾರಿ ವಿರುದ್ಧ ತನಿಖೆ ಶುರು ಮಾಡಲಾಗಿದೆ.
ಜನವರಿ 23ರಂದು ಆಂಧ್ರ ಪ್ರದೇಶದ ಕರ್ನೂಲ್ ಮೂಲದ ಜಾಹ್ನವಿ ಕಂದುಲಾ (23) ಎಂಬ ವಿದ್ಯಾರ್ಥಿನಿ ಸಾವನ್ನಪ್ಪಿದ್ದರು. ಸೌತ್ ಲೇಕ್ ಯೂನಿಯನ್‌ನಲ್ಲಿರುವ ಈಶಾನ್ಯ ವಿಶ್ವವಿದ್ಯಾಲಯದ ಕ್ಯಾಂಪಸ್‌ನ ವಿದ್ಯಾರ್ಥಿನಿಯಾಗಿದ್ದ ಜಾಹ್ನವಿಗೆ ಪೊಲೀಸ್ ಕಾರು ಡಿಕ್ಕಿ ಹೊಡೆದಿತ್ತು. ಡೆಕ್ಸ್ಟರ್ ಅವೆನ್ಯೂ ನಾರ್ತ್ ಮತ್ತು ಥಾಮಸ್ ಸ್ಟ್ರೀಟ್ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಸಿಯಾಟಲ್ ಪೊಲೀಸ್ ಕಾರು ಗುದ್ದಿ ಮೃತಪಟ್ಟಿದ್ದರು. ಇದೀಗ ಬಾಡಿಕ್ಯಾಮ್ ದೃಶ್ಯಾವಳಿಗಳು ಬಿಡುಗಡೆಯಾಗಿವೆ.
ಹೊಸದಾಗಿ ಬಿಡುಗಡೆಯಾದ ಬಾಡಿಕ್ಯಾಮ್ ದೃಶ್ಯಾವಳಿಗಳಲ್ಲಿ ಸಿಯಾಟಲ್ ಪೊಲೀಸ್ ಇಲಾಖೆಯ ಅಧಿಕಾರಿಯೊಬ್ಬರು ಸಹ ಪೊಲೀಸ್ ಓಡಿಸುತ್ತಿದ್ದ ಗಸ್ತು ಕಾರಿನಿಂದ ಡಿಕ್ಕಿ ಹೊಡೆದು ಸಾವನ್ನಪ್ಪಿದ ವಿದ್ಯಾರ್ಥಿನಿಯ ಬಗ್ಗೆ ಫೋನ್ನಲ್ಲಿ ನಗುತ್ತಾ ಮಾತನಾಡುವುದು. ತಮಾಷೆ ಮಾಡುತ್ತಿರುವುದು ಕಂಡುಬಂದಿದೆ. ಅಲ್ಲದೇ, ಸಿಯಾಟಲ್ ಪೊಲೀಸ್ ಅಧಿಕಾರಿಗಳ ಗಿಲ್ಡ್ ಉಪಾಧ್ಯಕ್ಷ ಡೇನಿಯಲ್ ಆಡೆರರ್ ಕಾರು ಚಾಲನೆ ಮಾಡುತ್ತಿರುವುದು ಸೆರೆಯಾಗಿದೆ. ಗಿಲ್ಡ್ ಅಧ್ಯಕ್ಷ ಮೈಕ್ ಸೋಲನ್ ಅವರೊಂದಿಗೆ ಮಾತನಾಡುತ್ತಾ ಡೇನಿಯಲ್, ''ಅವಳು ಸೀಮಿತ ಮೌಲ್ಯ ಹೊಂದಿದ್ದಳು'' (she had limited value) ಎಂಬುವುದಾಗಿ ಹೇಳುವುದನ್ನು ಕೇಳಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ.