ಕೈರೋ: ಭಾನುವಾರ ಈಜಿಪ್ಟ್‌ನ ಕೆಂಪು ಸಮುದ್ರದಲ್ಲಿ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ದೋಣಿಗೆ ಬೆಂಕಿ ಹೊತ್ತಿಕೊಂಡಿದೆ. ದೋಣಿಯಲ್ಲಿ ಹಲವಾರು ಬ್ರಿಟಿಷ್ ಪ್ರವಾಸಿಗರು ಪ್ರಯಾಣಿಸುತ್ತಿದ್ದು, ಅವರಲ್ಲಿ ಮೂವರು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಸಮುದ್ರದಲ್ಲಿ ಮೂವರು ನಾಪತ್ತೆ:ಈಜಿಪ್ಟಿನ ಕೆಂಪು ಸಮುದ್ರದಲ್ಲಿ ದುರಂತ ಘಟನೆಯೊಂದು ಸಂಭವಿಸಿದೆ. ಸಮುದ್ರದಲ್ಲಿ ಪ್ರಯಾಣಿಸುತ್ತಿದ್ದ ದೋಣಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮೂವರು ಬ್ರಿಟಿಷ್ ಪ್ರವಾಸಿಗರು ನಾಪತ್ತೆಯಾಗಿದ್ದಾರೆ (British tourists missing). ಸುದ್ದಿ ತಿಳಿದಾಕ್ಷಣ ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಕಾಣೆಯಾದ ಮೂವರು ಪ್ರವಾಸಿಗರಿಗಾಗಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ. ಘಟನೆ ನಡೆದಾಗ 15 ಬ್ರಿಟಿಷ್ ಪ್ರವಾಸಿಗರು ಸೇರಿದಂತೆ 27 ಜನರು ಮರ್ಸಾ ಆಲಂ ನಗರದ ಕರಾವಳಿಯಿಂದ ದೋಣಿಯಲ್ಲಿ ಪ್ರಯಾಣಿಸುತ್ತಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ವಿದೇಶಾಂಗ ಕಚೇರಿ ಹೇಳಿದ್ದು ಹೀಗೆ:ದೋಣಿಯಲ್ಲಿ ಪ್ರಯಾಣಿಸುತ್ತಿದ್ದ 15 ಬ್ರಿಟಿಷ್ ಪ್ರವಾಸಿಗರ ಪೈಕಿ 12 ಬ್ರಿಟಿಷ್ ಪ್ರವಾಸಿಗರು ಸೇರಿದಂತೆ 24 ಜನರನ್ನು ರಕ್ಷಿಸಲಾಗಿದೆ. ಇತರ ಮೂವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಕೆಂಪು ಸಮುದ್ರದಲ್ಲಿ ದೋಣಿ ದುರಂತ ಸಂಭವಿಸಿದೆ. ಮೂವರು ಬ್ರಿಟಿಷ್ ಪ್ರಯಾಣಿಕರು ನಾಪತ್ತೆಯಾಗಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ. ವಿದೇಶಾಂಗ ಕಚೇರಿಯ ವಕ್ತಾರರು ಅವರು ಸ್ಥಳೀಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಮತ್ತು ಘಟನೆಯಲ್ಲಿ ಭಾಗಿಯಾಗಿರುವ ಬ್ರಿಟಿಷ್ ಪ್ರಜೆಗಳಿಗೆ ಸಹಾಯ ಮಾಡಲು ಕೆಲಸ ಮಾಡುತ್ತಿದ್ದಾರೆ ಎಂದು ಯುಕೆ ವಿದೇಶಾಂಗ ಕಚೇರಿಯ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಶಾರ್ಕ್ ದಾಳಿಯಲ್ಲಿ ರಷ್ಯಾ ವ್ಯಕ್ತಿ ಬಲಿ:ರೆಡ್ ಸೀ ರೆಸಾರ್ಟ್ ಹುರ್ಘಡಾ ಕಡಲತೀರದಲ್ಲಿ ಇತ್ತಿಚೇಗೆ ದುರಂತವೊಂದು ಸಂಭವಿಸಿತ್ತು. ಈ ಕರಾವಳಿಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಟೈಗರ್ ಶಾರ್ಕ್ ದಾಳಿ ಮಾಡಿತ್ತು. ಶಾರ್ಕ್‌ನಿಂದ ತನ್ನನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುವಾಗ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ವ್ಯಕ್ತಿ ಸಾವನ್ನಪ್ಪುತ್ತಿರುವ ವಿಡಿಯೋ ಟ್ವಿಟರ್ ನಲ್ಲಿ ವೈರಲ್ ಆಗಿತ್ತು.