ಲಂಡನ್ (ಇಂಗ್ಲೆಂಡ್):ಬ್ರಿಟನ್ ಸರ್ಕಾರದಲ್ಲಿ ಮತ್ತೆ ಬಿರುಗಾಳಿ ಎದ್ದಿದೆ. ಗೃಹ ಕಾರ್ಯದರ್ಶಿ ಸುಯೆಲ್ಲಾ ಬ್ರಾವರ್‌ಮನ್ ಬುಧವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಇದು ಯುಕೆ ಪ್ರಧಾನಿ ಲಿಜ್ ಟ್ರಸ್ ಅವರಿಗೆ ಮತ್ತೊಂದು ಹೊಡೆತ ನೀಡಿದಂತಾಗಿದೆ.
ಇನ್ನು ಸರ್ಕಾರದ ಮುಖ್ಯ ಸಚೇತಕ ವೆಂಡಿ ಮಾರ್ಟನ್ ಅವರು ತಮ್ಮ ಉಪನಾಯಕ ಕ್ರೇಗ್ ವಿಟ್ಟೇಕರ್ ಅವರೊಂದಿಗೆ ರಾಜೀನಾಮೆ ನೀಡಿದ್ದಾರೆ ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ. ಪಕ್ಷದಲ್ಲಿ ಶಿಸ್ತು ಕಾಪಾಡಿಕೊಳ್ಳುವುದು ಮಾರ್ಟನ್ ಅವರ ಜವಾಬ್ದಾರಿ. 2015 ರಿಂದ ವೆಸ್ಟ್ ಮಿಡ್‌ಲ್ಯಾಂಡ್ಸ್‌ನ ಆಲ್ಡ್ರಿಡ್ಜ್-ಬ್ರೌನ್‌ಹಿಲ್ಸ್‌ನ ಸಂಸದರಾಗಿದ್ದ ಮಾರ್ಟನ್ ಅವರನ್ನು ಆರು ವಾರಗಳ ಹಿಂದೆಯಷ್ಟೇ ಆ ಸ್ಥಾನಕ್ಕೆ ನೇಮಕ ಮಾಡಲಾಗಿತ್ತು.
ಗೋವಾ ಮೂಲದ ತಂದೆ ಮತ್ತು ತಮಿಳು ಮೂಲದ ತಾಯಿಯ ಮಗಳಾದ ಬ್ರಾವರ್ ಮನ್ , 43 ದಿನಗಳ ಹಿಂದೆ ಬ್ರಿಟಿಷ್ ಪ್ರಧಾನಿ ಲಿಜ್ ಟ್ರಸ್ ಅಧಿಕಾರ ವಹಿಸಿಕೊಂಡಾಗ ಗೃಹ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. ಬುಧವಾರ ಟ್ರಸ್ ಜೊತೆಗೆ ಮುಖಾಮುಖಿ ಸಭೆ ನಂತರ ಅವರು ಗೃಹ ಕಾರ್ಯದರ್ಶಿ ಹುದ್ದೆ ತೊರೆದಿದ್ದಾರೆ.
ಈ ಹಿಂದಿನ ಅರ್ಥ ಸಚಿವ ಕ್ವಾಸಿ ಕ್ವಾರ್ಟೆಂಗ್ ಅವರ ಸ್ಥಾನಕ್ಕೆ ಬಂದ ನೂತನ ಹಣಕಾಸು ಮುಖ್ಯಸ್ಥ ಜೆರೆಮಿ ಹಂಟ್ ಮಾರುಕಟ್ಟೆಯಲ್ಲಿನ ಅವ್ಯವಸ್ಥೆಯನ್ನು ಸರಿದಾರಿಗೆ ತರಲು ಕೈಗೊಂಡಿದ್ದ ಎಲ್ಲ ನಿರ್ಧಾರಗಳನ್ನು ರದ್ದುಗೊಳಿಸಿದ್ದಾರೆ. ಇದು ಟ್ರಸ್ ಸರ್ಕಾರವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈಗ ಮಾಜಿ ಗೃಹ ಕಾರ್ಯದರ್ಶಿ ಸುಯೆಲ್ಲಾ ಬ್ರಾವರ್‌ಮನ್ ಅವರು ದಿಢೀರ್ ರಾಜೀನಾಮೆ ಘೋಷಿಸಿರುವುದು ದೊಡ್ಡ ಆಘಾತ ನೀಡಿದೆ. ಅವರು ಬರೆದಿರುವ ನಿರ್ಗಮನ ಪತ್ರದಲ್ಲಿ ಪ್ರಧಾನಿಯನ್ನು ಗುರಿಯಾಗಿಸಿಕೊಂಡಿರುವುದು ಟ್ರಸ್ ಅವರನ್ನ ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿದೆ.
ಇಂದು ಸುಯೆಲ್ಲಾ ಬ್ರಾವರ್‌ಮನ್ ನಿರ್ಗಮಿಸಿದ ನಂತರ ಟ್ರಸ್ ಬುಧವಾರ ವೆಲ್ವಿನ್ ಹ್ಯಾಟ್‌ಫೀಲ್ಡ್ ಎಂಪಿ ಗ್ರಾಂಟ್ ಶಾಪ್ಸ್ ಅವರನ್ನು ಹೊಸ ಗೃಹ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. Rt Hon Grant Shapps MP @grantshapps ಅವರನ್ನು ಗೃಹ ಇಲಾಖೆ @ukhomeoffice ನ ರಾಜ್ಯ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ ಎಂದು ಯುಕೆ ಪ್ರಧಾನ ಮಂತ್ರಿ ಕಚೇರಿ ಟ್ವೀಟ್‌ನಲ್ಲಿ ತಿಳಿಸಿದೆ.
ಇದನ್ನು ಓದಿ:ಮೊನ್ನೆ ಡೇಂಜರ್ ರಾಷ್ಟ್ರ, ಇಂದು ವಿಶ್ವಾಸದ ದೇಶ.. ಪಾಕಿಸ್ತಾನದ ಬಗ್ಗೆ ಅಮೆರಿಕ ದ್ವಂದ್ವ ಹೇಳಿಕೆ