ನವದೆಹಲಿ: ತಮ್ಮ ಅಧಿಕಾರಾವಧಿಯ ಕಳೆದ ಎರಡು ವರ್ಷಗಳಲ್ಲಿ ಕಪ್ಪು ಹಣದ ಬಗ್ಗೆ ತಮಗೆ ಬಹುತೇಕ ಯಾವುದೇ ವಿಚಾರವೂ ಕೇಳಿ ಬಂದಿಲ್ಲ ಎಂದು ಭಾರತದಲ್ಲಿನ ಸ್ವಿಟ್ಜರ್ಲೆಂಡ್ ರಾಯಭಾರಿ ರಾಲ್ಫ್ ಹೆಕ್ನರ್ ಹೇಳಿದ್ದಾರೆ. ಈ ವಿಷಯವನ್ನು ಸ್ವಿಟ್ಜರ್ಲೆಂಡ್ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ಒಪ್ಪಂದದ ಮೇರೆಗೆ ಎರಡು ದೇಶಗಳ ನಡುವೆ ಬ್ಯಾಂಕಿಂಗ್ ಮಾಹಿತಿಯ ಸ್ವಯಂಚಾಲಿತ ವಿನಿಮಯದ ಮೂಲಕ ನಿರ್ವಹಿಸಲಾಗಿದೆ. ಕಪ್ಪು ಹಣ ಇವತ್ತು ಒಂದು ವಿಷಯವೇ ಅಲ್ಲ ಎಂದು ಅವರು ತಿಳಿಸಿದರು. ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ವಿಚಾರ ಹಂಚಿಕೊಂಡಿದ್ದಾರೆ.
ನಾನು ಎರಡು ವರ್ಷಗಳಿಗೂ ಹೆಚ್ಚು ಕಾಲ ಸ್ವಿಸ್ ರಾಯಭಾರಿಯಾಗಿದ್ದೇನೆ ಮತ್ತು ಕಪ್ಪು ಹಣದ ಬಗ್ಗೆ ನನಗೆ ಬಹುತೇಕ ಏನೂ ಕೇಳಿ ಬಂದಿಲ್ಲ. ಸ್ವಿಟ್ಜರ್ಲೆಂಡ್ ಮತ್ತು ಭಾರತದ ನಡುವೆ (ಎರಡೂ ಕಡೆಗಳಿಂದ) ಬ್ಯಾಂಕಿಂಗ್ ಮಾಹಿತಿಯ ಸ್ವಯಂಚಾಲಿತ ವಿನಿಮಯದ ಕುರಿತು 2018 ರಲ್ಲಿ ಸ್ವಿಟ್ಜರ್ಲೆಂಡ್ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ಒಪ್ಪಂದದ ಮೂಲಕ ಕಪ್ಪು ಹಣದ ಸಮಸ್ಯೆಯನ್ನು ಪರಿಹರಿಸಲಾಗಿದೆ ಎಂದು ಸ್ವಿಸ್ ರಾಯಭಾರಿ ಮಾಧ್ಯಮಕ್ಕೆ ತಿಳಿಸಿದರು.
ದ್ವಿಪಕ್ಷೀಯ ಸಂಬಂಧಗಳ ಮೇಲೆ ಯಾವುದೇ ಸಮಸ್ಯೆಯನ್ನೂ ಬೀರಿಲ್ಲ:ಸ್ವಿಟ್ಜರ್ಲೆಂಡ್ ಮತ್ತು ಭಾರತದ ನಡುವೆ ಹಲವಾರು ಬ್ಯಾಚ್‌ಗಳಲ್ಲಿ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲಾಗಿದೆ. ಹಾಗಾಗಿ ಕಪ್ಪು ಹಣದ ಸಮಸ್ಯೆ ಇನ್ನು ಮುಂದೆ ಸಮಸ್ಯೆಯಾಗಿ ಉಳಿದಿಲ್ಲ. ನಮ್ಮ ಆರ್ಥಿಕ ಸಂಬಂಧಗಳ ವಿಚಾರದಲ್ಲಿ ದ್ವಿಪಕ್ಷೀಯ ಸಂಬಂಧಗಳ ಮೇಲೆ ಯಾವುದೇ ಸಮಸ್ಯೆಯೂ ಇಲ್ಲ. ಇದು ಮಾತ್ರವಲ್ಲದೆ ಸಂಬಂಧಗಳ ವಿಷಯದಲ್ಲಿ ಸುಸ್ಥಿರತೆಯು ಪ್ರಧಾನ ಮಂತ್ರಿಗಳಿಗೆ (ನರೇಂದ್ರ ಮೋದಿ) ಅತ್ಯಂತ ಪ್ರಿಯವಾಗಿದೆ ಮತ್ತು ಸ್ವಿಸ್ ಸರ್ಕಾರಕ್ಕೂ ಇದು ಅನ್ವಯಿಸುತ್ತದೆ ಎಂದರು.
ಹಣಕಾಸು ಕ್ಷೇತ್ರವು ಮತ್ತಷ್ಟು ಸುಸ್ಥಿರವಾಗುವುದನ್ನು ಸ್ವಿಸ್ ಸರ್ಕಾರ ಬಯಸುತ್ತದೆ ಎಂದು ಹೇಳಿದ ಸ್ವಿಸ್ ರಾಯಭಾರಿ ಹೆಕ್ನರ್, ಬರುವ ಬೇಸಿಗೆ ಋತುವಿನಲ್ಲಿ ಸ್ವಿಸ್ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದರು. ಆದರೆ ಈ ಭೇಟಿಯ ನಿಖರ ದಿನಾಂಕವನ್ನು ಅವರು ತಿಳಿಸಲಿಲ್ಲ. ಸ್ವಿಸ್ ಒಕ್ಕೂಟದ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡುತ್ತಾರೆ ಎಂದು ನಾನು ನಿರೀಕ್ಷಿಸುತ್ತಿದ್ದೇನೆ. ಇದು ಬೇಸಿಗೆಯಲ್ಲಿ ನಡೆಯಬಹುದು ಎಂದು ನಿರೀಕ್ಷಿಸುತ್ತಿದ್ದೇವೆ. ಇದಕ್ಕಾಗಿ ನಾವು ವಿದೇಶಾಂಗ ಸಚಿವಾಲಯ ಮತ್ತು ಭಾರತ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಅವರು ಹೇಳಿದರು.
ಭಾರತವನ್ನು ಸ್ವಿಸ್ ಬೆಂಬಲಿಸುತ್ತದೆ:ಭಾರತದ ಜಿ20 ಅಧ್ಯಕ್ಷತೆಯ ಬಗ್ಗೆ ಮಾತನಾಡಿದ ಹೆಕ್ನರ್, ಸುಸ್ಥಿರ ಶಾಂತಿ ಕಾಪಾಡುವಲ್ಲಿ ಮತ್ತು ಒಂದು ಭೂಮಿ ಒಂದು ಕುಟುಂಬ ಪ್ರಯತ್ನಗಳಿಗಾಗಿ ಸ್ವಿಸ್ ಭಾರತವನ್ನು ಬೆಂಬಲಿಸುತ್ತದೆ ಎಂದರು ಮತ್ತು ತಮಗೆ ಆಮಂತ್ರಣ ನೀಡಿದ್ದಕ್ಕಾಗಿ ಭಾರತಕ್ಕೆ ಧನ್ಯವಾದಗಳನ್ನು ತಿಳಿಸಿದರು. ಇದಲ್ಲದೇ, ಭಾರತ ಮತ್ತು ಸ್ವಿಟ್ಜರ್ಲೆಂಡ್ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ಕುರಿತು ಮಾತುಕತೆ ನಡೆಸುತ್ತಿವೆ ಮತ್ತು 2023 ರಲ್ಲಿ ಅದನ್ನು ಸಂಪೂರ್ಣ ಜಾರಿಗೆ ತರುವ ಬಗ್ಗೆ ಸ್ವಿಸ್ ಉತ್ಸುಕವಾಗಿದೆ ಎಂದು ಹೇಳಿದರು.
ಬಹಳ ಕಡಿಮೆ ಅವಧಿಯಲ್ಲಿ ಭಾರತವು 2022 ರಲ್ಲಿ ಯುಎಇ ಮತ್ತು ಆಸ್ಟ್ರೇಲಿಯಾದೊಂದಿಗೆ ಎರಡು ಪ್ರಮುಖ ಪಾಲುದಾರಿಕೆ ಒಪ್ಪಂದಗಳನ್ನು ಮಾಡಿಕೊಂಡಿದೆ ಎಂಬುದು ಗಮನಾರ್ಹ. ಆಸ್ಟ್ರೇಲಿಯಾ - ಭಾರತ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದ (ECTA) ಡಿಸೆಂಬರ್ 29, 2022 ರಂದು ಜಾರಿಗೆ ಬಂದಿದೆ. ಮೇ 1, 2022 ರಂದು ಯುಎಇ ಜೊತೆಗಿನ ವ್ಯಾಪಾರ ಒಪ್ಪಂದವು ಜಾರಿಗೆ ಬಂದಿತು.
ಇದನ್ನೂ ಓದಿ: ಸ್ವಿಸ್ ಬ್ಯಾಂಕ್ಗಳಲ್ಲಿ ಕಪ್ಪು ಹಣದ ಏರಿಕೆ ಆಗಿಲ್ಲ : ವಿತ್ತ ಸಚಿವಾಲಯ ಸ್ಪಷ್ಟನೆ