ವಾಷಿಂಗ್ಟನ್:ಕಳೆದ ತಿಂಗಳು ಭೀಕರದುರಂತಕ್ಕೀಡಾದ ಚೀನಾ ಈಸ್ಟರ್ನ್ ಏರ್‌ಲೈನ್ಸ್ ವಿಮಾನದ ಬ್ಲ್ಯಾಕ್ ಬಾಕ್ಸ್ ತನಿಖೆಯಿಂದ ಈ ಘಟನೆ 'ಉದ್ದೇಶಪೂರ್ವಕ' ಆಗಿರಬಹುದು ಎನ್ನುವುದನ್ನು ಸೂಚಿಸುತ್ತದೆ ಎಂದು ಹಲವು ಮಾಧ್ಯಮ ವರದಿಗಳು ಉಲ್ಲೇಖಿಸಿವೆ. 132 ಜನರನ್ನು ಬಲಿ ಪಡೆದ ದುರಂತ ಉದ್ದೇಶಪೂರ್ವಕವಾಗಿತ್ತು. ವಿಮಾನ ಧರೆಗಪ್ಪಳಿಸಿದ ಸ್ಥಳದಲ್ಲಿ ಸಿಕ್ಕಿದ ಬ್ಲ್ಯಾಕ್ ಬಾಕ್ಸ್ ಪರಿಶೀಲಿಸಿದಾಗ ಸ್ಫೋಟಕ ಮಾಹಿತಿ ಪತ್ತೆಯಾಗಿದೆ ಎಂದು ಮೂಲಗಳನ್ನು ಆಧರಿಸಿ ಅಮೆರಿಕದ ಪ್ರಮುಖ ಪತ್ರಿಕೆಯೊಂದು ವರದಿ ಮಾಡಿದೆ.
ಕಳೆದ ಮಾರ್ಚ್ನಲ್ಲಿ ಚೀನಾದ ಈಸ್ಟ್ರನ್ ಜೆಟ್ ಕಂಪನಿಗೆ ಸೇರಿದ ವಿಮಾನ ಕುನ್ಮಿಂಗ್‌ನಿಂದ ಗ್ವಾಂಗ್‌ಝೌಗೆ ಪ್ರಯಾಣಿಸುವ ವೇಳೆ ಏಕಾಏಕಿ ರಾಕೆಟ್‌ನಂತೆ ಪತನಗೊಂಡಿತ್ತು. ಪೈಲಟ್ ತಪ್ಪಿನಿಂದಾಗಿ ಅಥವಾ ಆತ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದಲೇ ವಿಮಾನವನ್ನು ಉದ್ದೇಶಪೂರ್ವಕವಾಗಿಯೇ ಪತನಗೊಳಿಸಿರಬಹುದು ಎಂಬ ಮಾತುಗಳು ಆ ಸಂದರ್ಭದಲ್ಲಿ ಕೇಳಿಬಂದಿದ್ದವು. ಇದಕ್ಕೆ ಪೂರಕವೆಂಬಂತೆ ಇದೀಗ ಅಮೆರಿಕದ ತಜ್ಞರ ವರದಿಯಲ್ಲಿ, ವಿಮಾನಪತನ ಉದ್ದೇಶ ಪೂರ್ವಕವಾಗಿತ್ತು ಎಂಬ ಮಾಹಿತಿ ಹೊರಬಿದ್ದಿದೆ.