ಬರ್ಮಿಂಗ್ಹ್ಯಾಮ್: 'ಮಿನಿ ಒಲಿಂಪಿಕ್ಸ್' ಎಂದೇ ಹೆಸರಾಗಿರುವ ಕಾಮನ್‌ವೆಲ್ತ್ ಕ್ರೀಡಾಕೂಟದ 22ನೇ ಆವೃತ್ತಿ ಗುರುವಾರದಿಂದ ಆರಂಭವಾಗಿದೆ. ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿರುವ ಅಲೆಕ್ಸಾಂಡರ್ ಸ್ಟೇಡಿಯಂನಲ್ಲಿ ಭಾರತೀಯ ಕಾಲಮಾನ ರಾತ್ರಿ 11:30ಕ್ಕೆ ಸುಮಾರು 30,000 ಪ್ರೇಕ್ಷಕರ ನಡುವೆ ಕ್ರೀಡಾಕೂಟಕ್ಕೆ ವರ್ಣರಂಜಿತ ಚಾಲನೆ ಸಿಕ್ಕಿತು.
ಬರ್ಮಿಂಗ್‌ಹ್ಯಾಮ್‌ನ ಭವ್ಯತೆ, ಶ್ರೀಮಂತ ಸಂಸ್ಕೃತಿ, ಸಂಗೀತ ಮತ್ತು ವೈವಿಧ್ಯತೆಯ ಅದ್ಭುತ ಪ್ರದರ್ಶನ ಅದ್ಧೂರಿ ಕಾರ್ಯಕ್ರಮದಲ್ಲಿ ಮೇಳೈಸಿತು. ಜಗತ್ಪ್ರಸಿದ್ಧ ನಟ ಚಾರ್ಲಿ ಚಾಪ್ಲಿನ್‌ಗೆ ಗೌರವ ಸಮರ್ಪಣೆ ನಡೆಯಿತು. ಕ್ವೀನ್ ಎಲಿಜಬೆತ್ II ಅನುಪಸ್ಥಿತಿಯಲ್ಲಿ ಪ್ರಿನ್ಸ್ ಚಾರ್ಲ್ಸ್ ಪ್ರತಿನಿಧಿಸಿದರು.
ಏನಿದು ಕಾಮನ್‌ವೆಲ್ತ್ ಗೇಮ್ಸ್?ಕಾಮನ್‌ವೆಲ್ತ್ ಕ್ರೀಡಾಕೂಟವು ಬಹು-ಕ್ರೀಡಾ ಸ್ಪರ್ಧೆ. ಇದನ್ನು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಆಯೋಜಿಸಲಾಗುತ್ತದೆ. ಕಾಮನ್‌ವೆಲ್ತ್ ಒಕ್ಕೂಟ ಸದಸ್ಯ ರಾಷ್ಟ್ರಗಳು ಮಾತ್ರ ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತವೆ. ಸದ್ಯ ಕಾಮನ್‌ವೆಲ್ತ್ ಒಕ್ಕೂಟದಲ್ಲಿ 56 ಸದಸ್ಯ ರಾಷ್ಟ್ರಗಳಿವೆ. ಇದಲ್ಲದೆ ಒಲಿಂಪಿಕ್ಸ್‌ನಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸದ ಇತರ ಪ್ರಾಂತ್ಯಗಳಿಗೂ ಈ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಅದರಂತೆ ಈ ಬಾರಿ 72 ಧ್ವಜಗಳ ಅಡಿಯಲ್ಲಿ 5 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಪದಕಕ್ಕಾಗಿ ಸ್ಪರ್ಧಿಸಲಿದ್ದಾರೆ.