ಸ್ಯಾನ್ ಫ್ರಾನ್ಸಿಸ್ಕೋ:ಇತ್ತೀಚೆಗೆ 'ಅನ್‌ಕನ್‌ಫ್ಯೂಸ್ ಮಿ ವಿತ್ ಬಿಲ್ ಗೇಟ್ಸ್' ಎಂಬ ಪಾಡ್‌ಕಾಸ್ಟ್ ಆರಂಭಿಸಿರುವ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕರಾದ ಬಿಲ್ ಗೇಟ್ಸ್, ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಫೋಟೋ ಹಿಡಿದು ಖಾನ್ ಅಕಾಡೆಮಿಯ ಸಂಸ್ಥಾಪಕ ಹಾಗೂ ತಮ್ಮ ಅತಿಥಿ ಖ್ಯಾತ ಉದ್ಯಮಿ ಸಲ್ ಖಾನ್ ಅವರಿಗೆ ಕೆಲವು ಮೋಜಿನ ಪ್ರಶ್ನೆಗಳನ್ನು ಕೇಳಿದರು. ಈ ಪ್ರಶ್ನೆಗಳಿಗೆ ಸಲ್ ಖಾಲ್ ತಮಾಷೆಯಾಗಿಯೇ ಉತ್ತರಿಸಿದ್ದಾರೆ.
"ನೀವು ಗೂಗಲ್ ಸರ್ಚ್ನಲ್ಲಿ ಸಲ್ ಖಾನ್ ಅಂತಲೋ ಅಥವಾ ತಮ್ಮ ವೆಬ್ಸೈಟ್ಗಳನ್ನೇನಾದರೂ ಹುಡುಕಾಡಿದರೆ, ನಿಮಗೆ ಈ ವ್ಯಕ್ತಿ ಸಿಗಬಹುದು" ಎಂದು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಭಾವಚಿತ್ರವನ್ನು ತೋರಿಸಿದ ಗೇಟ್ಸ್, "ನೀವು ಯಾವಾತ್ತಾದರೂ ಇಂತಹ ಘಟನೆ ಕಂಡು ಅಚ್ಚರಿಗೊಳಗಾಗಿದ್ದು ಉಂಟೇ?" ಎಂದರು. ಸಲ್ ಖಾಲ್ ಮತ್ತು ಸಲ್ಮಾನ್ ಖಾನ್ ಒಂದೇ ಅರ್ಥದಲ್ಲಿ ಕೇಳಿ ಬರುವ ಹೆಸರಾಗಿದ್ದರಿಂದ ಬಿಲ್ ಗೇಟ್ಸ್ ಹೀಗೆ ಪ್ರಶ್ನಿಸಿದ್ದಾರೆ.
ಇದಕ್ಕೆ ಸಲ್ ಖಾನ್ ನಗುತ್ತಾ ಕೆಲವು ಘಟನಾವಳಿಗಳನ್ನು ಮೆಲುಕು ಹಾಕಿದರು. "ನಮ್ಮ ಖಾನ್ ಅಕಾಡೆಮಿಯ ಆರಂಭದ ದಿನಗಳಲ್ಲಿ ಇಂತಹ ಹಲವು ಘಟನೆಗಳು ನಡೆದಿವೆ. ನಾನು ಮಾಡುವ ಪಾಠ ನೋಡಿ ಸಲ್ಮಾನ್ ಖಾನ್ ಅವರ ಎಷ್ಟೋ ಅಭಿಮಾನಿಗಳು ತಪ್ಪಾಗಿ ನನಗೆ ಇ-ಮೇಲ್ ಮಾಡಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ನಿಮ್ಮನ್ನು ನಾನು ತುಂಬಾ ತುಂಬಾ ಪ್ರೀತಿಸುತ್ತೇನೆ. ಗಣಿತದ ಬಗ್ಗೆ ನೀವು ಇಷ್ಟು ಆಳವಾಗಿ ತಿಳಿದುಕೊಂಡಿದ್ದೀರಿ ಅಂತ ನನಗೆ ಗೊತ್ತೇ ಇರಲಿಲ್ಲ" ಎಂದು ಅವರ ಕೆಲವು ಅಭಿಮಾನಿಗಳಿಂದ ನನಗೆ ಪತ್ರಗಳು ಬಂದಿದ್ದವು. "ಈ ರೀತಿಯ ಹಲವು ಘಟನೆಗಳು ನಡೆದಿವೆ. ಇದಕ್ಕೆಲ್ಲ ಕಾರಣ ಖಾನ್ ಎಂಬ ಹೆಸರು" ಎಂದು ತಮಾಷೆಯಾಡಿದರು.