ಕರ್ನಾಟಕ

karnataka

ETV Bharat / international

ಹಿರೋಷಿಮಾದಲ್ಲಿ ಪ್ರಧಾನಿ ಮೋದಿ - ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ನಡುವೆ ದ್ವಿಪಕ್ಷೀಯ ಸಭೆ?

ಜಪಾನ್‌ನ ಹಿರೋಷಿಮಾದಲ್ಲಿ ಪ್ರಧಾನಿ ಮೋದಿ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನಡುವೆ ದ್ವಿಪಕ್ಷೀಯ ಸಭೆ ನಡೆಯುವ ನಿರೀಕ್ಷೆ ಇದೆ.

bilateral-meeting-between-modi-and-zelensky-possible-in-hiroshima
ಪ್ರಧಾನಿ ಮೋದಿ - ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ನಡುವೆ ದ್ವಿಪಕ್ಷೀಯ ಸಭೆ

By

Published : May 19, 2023, 6:28 PM IST

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರದಿಂದ ಜಪಾನ್, ಪಪುವಾ ನ್ಯೂಗಿನಿಯಾ ಮತ್ತು ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾರೆ. ಜಪಾನ್‌ನ ಹಿರೋಷಿಮಾದಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ ಪಿಎಂ ಮೋದಿ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಯುವ ಸಾಧ್ಯತೆ ಇದೆ.

ಶುಕ್ರವಾರ ಬೆಳಗ್ಗೆ ದೆಹಲಿಯಿಂದ ತಮ್ಮ ಪ್ರಯಾಣ ಆರಂಭಿಸಿರುವ ಪ್ರಧಾನಿ ಮೋದಿ ಈಗಾಗಲೇ ಹಿರೋಷಿಮಾಗೆ ತಲುಪಿದ್ದಾರೆ. ಜಿ7 ಶೃಂಗಸಭೆಯಲ್ಲಿ ಅವರು ಭಾಗವಹಿಸಲಿದ್ದಾರೆ. ಜಪಾನ್ ಪ್ರಧಾನಿ ಫುಮಿಯೊ ಕಿಶಿಡಾ ಸೇರಿದಂತೆ ಹಲವಾರು ಇತರ ವಿಶ್ವ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಲಿದ್ದಾರೆ. ಇದೇ ವೇಳೆ ಇಲ್ಲಿ ಶನಿವಾರ ಮೋದಿ ಮತ್ತು ಝೆಲೆನ್ಸ್ಕಿ ಭೇಟಿಯಾಗಲಿದ್ದಾರೆ ಎಂಬ ಭಾರತ ಮತ್ತು ಉಕ್ರೇನ್‌ನ ಹಿರಿಯ ರಾಜತಾಂತ್ರಿಕರು ನಿರೀಕ್ಷೆ ಹೊಂದಿದ್ದಾರೆ.

ಆದರೆ, ಈ ಬಗ್ಗೆ ಇನ್ನೂ ಯಾವುದನ್ನೂ ಅಂತಿಮವಾಗಿ ನಿರ್ಧರಿಸಲಾಗಿಲ್ಲ. ಈ ಮಾತುಕತೆಯ ಪ್ರಸ್ತಾವನೆಯನ್ನು ಅಂತಿಮಗೊಳಿಸಲು ಎರಡೂ ರಾಷ್ಟ್ರಗಳ ಅಧಿಕಾರಿಗಳು ತೊಡಗಿದ್ದಾರೆ ಎಂದು ವರದಿಯಾಗಿದೆ. ದ್ವಿಪಕ್ಷೀಯ ಸಭೆ ಅಂತಿಮವಾದಲ್ಲಿ ಕಳೆದ ವರ್ಷ ಫೆಬ್ರವರಿಯಲ್ಲಿ ಉಕ್ರೇನ್ ಮೇಲೆ ರಷ್ಯಾ ಯುದ್ಧ ಸಾರಿದ ನಂತರ ಉಭಯ ನಾಯಕರ ನಡುವಿನ ಮೊದಲ ಸಭೆಯಾಗಲಿದೆ. ಜಪಾನ್‌ನ ಆಹ್ವಾನದ ಮೇರೆಗೆ ಝೆಲೆನ್ಸ್ಕಿ ಜಿ7 ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.

ಕಳೆದ ತಿಂಗಳು ಉಕ್ರೇನ್‌ನ ಉಪ ವಿದೇಶಾಂಗ ಸಚಿವ ಎಮಿನ್ ಝಪರೋವಾ ಭಾರತಕ್ಕೆ ಭೇಟಿ ನೀಡಿದ್ದರು. ಉಕ್ರೇನ್ ವಿರುದ್ಧ ರಷ್ಯಾ ದಾಳಿ ಆರಂಭವಾದ ನಂತರ ಉಕ್ರೇನ್‌ನ ಪ್ರಮುಖ ನಾಯಕರೊಬ್ಬರು ಭಾರತಕ್ಕೆ ನೀಡಿದ ಮೊದಲ ಭೇಟಿ ಇದಾಗಿತ್ತು. ಪ್ರಧಾನಿ ಮೋದಿ ಅವರಿಗೆ ಬರೆದ ಪತ್ರವನ್ನು ಜಾಪರೋವಾ ಅವರು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಅವರಿಗೆ ಪತ್ರವನ್ನು ಹಸ್ತಾಂತರಿಸಿದ್ದರು.

ಉಕ್ರೇನ್‌ನಲ್ಲಿ ಯುದ್ಧ ಪ್ರಾರಂಭವಾದಾಗಿನಿಂದ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರೊಂದಿಗೆ ಹಲವಾರು ಬಾರಿ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಕಳೆದ ವರ್ಷ ಅಕ್ಟೋಬರ್ 4ರಂದು ಝೆಲೆನ್ಸ್ಕಿಯೊಂದಿಗೆ ನಡೆದ ದೂರವಾಣಿ ಸಂಭಾಷಣೆಯಲ್ಲಿ ಮೋದಿ, ಮಿಲಿಟರಿಯಿಂದ ಯಾವುದೇ ಪರಿಹಾರ ಸಾಧ್ಯವಿಲ್ಲ. ಶಾಂತಿ ನಿರ್ಮಾಣದ ಯಾವುದೇ ಪ್ರಯತ್ನದಲ್ಲಿ ಸಹಕರಿಸಲು ಭಾರತ ಸಿದ್ಧವಾಗಿದೆ ಎಂದು ಹೇಳಿದ್ದರು. ಉಕ್ರೇನ್ ಮೇಲೆ ರಷ್ಯಾ ನಡೆಸಿದ ದಾಳಿಯನ್ನು ಭಾರತ ಎಂದಿಗೂ ಖಂಡಿಸಿಲ್ಲ. ಈ ಬಿಕ್ಕಟ್ಟನ್ನು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಪರಿಹರಿಸಬೇಕೆಂದು ಭಾರತ ಹೇಳುತ್ತಲೇ ಇದೆ.

ಆರು ದಿನಗಳ ಪ್ರವಾಸ:ಜಪಾನ್, ಪಪುವಾ ನ್ಯೂಗಿನಿ ಮತ್ತು ಆಸ್ಟ್ರೇಲಿಯಾ ಸೇರಿ ಮೂರು ರಾಷ್ಟ್ರಗಳಿಗೆ ಪ್ರಧಾನಿ ಮೋದಿ ಒಟ್ಟು ಆರು ದಿನಗಳ ಕಾಲ ಪ್ರವಾಸದಲ್ಲಿದ್ದಾರೆ. ಇಂದು ಆರಂಭವಾಗಿರುವ ಅವರ ವಿದೇಶ ಪ್ರವಾಸವು ಮೇ 24ರವರೆಗೆ ಇರಲಿದೆ. ಇಂದಿನಿಂದ 21ರವರೆಗೆ ಜಪಾನ್‌ನ ಹಿರೋಷಿಮಾದಲ್ಲಿ ಇರಲಿದ್ದಾರೆ. ಮೇ 22ರಂದು ಪಪುವಾ ನ್ಯೂಗಿನಿಯಾಗೆ ಭೇಟಿ ನೀಡಲಿದ್ದಾರೆ. ಈ ಮೂಲಕ ಪಪುವಾ ನ್ಯೂಗಿನಿಯಾ ಪ್ರವಾಸ ಕೈಗೊಂಡ ಮೊದಲ ಪ್ರಧಾನಿ ಆಗಲಿದ್ದಾರೆ. ಇದಾದ ನಂತರ ಆಸ್ಟ್ರೇಲಿಯಾಕ್ಕೆ ಅವರು ತೆರಳಲಿದ್ದಾರೆ.

ಇದನ್ನೂ ಓದಿ:ಜಿ 7 ಶೃಂಗಸಭೆಯಲ್ಲಿ ಭಾಗಿಯಾಗಲು ಜಪಾನ್​ಗೆ ತೆರಳಿದ ಪ್ರಧಾನಿ ಮೋದಿ

ABOUT THE AUTHOR

...view details