ಕಠ್ಮಂಡು(ನೇಪಾಳ):ಫ್ರೆಂಚ್ ಸೀರಿಯಲ್ ಕಿಲ್ಲರ್ ಚಾರ್ಲ್ಸ್ ಶೋಭರಾಜ್ನನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ನೇಪಾಳದ ಸುಪ್ರೀಂ ಕೋರ್ಟ್ ಬುಧವಾರ ಆದೇಶಿಸಿದೆ. 1970ರ ದಶಕದಲ್ಲಿ ಏಷ್ಯಾದಲ್ಲಿ ನಡೆದ ಹಲವಾರು ಸರಣಿ ಕೊಲೆಗಳಿಗೆ ಕಾರಣನಾಗಿದ್ದ ಶೋಭರಾಜ್ ಜೀವನವನ್ನು ಆಧರಿಸಿ ಚಿತ್ರಿಸಲಾದ "ದಿ ಸರ್ಪೆಂಟ್" ವೆಬ್ ಸಿರೀಸ್ ನೆಟ್ಫ್ಲಿಕ್ಸ್ನಲ್ಲಿ ಪ್ರದರ್ಶಿತವಾಗಿದೆ.
ಇಬ್ಬರು ಉತ್ತರ ಅಮೆರಿಕನ್ನರ ಕೊಲೆ ಅಪರಾಧದಲ್ಲಿ 2003 ರಿಂದ ನೇಪಾಳದ ಜೈಲಿನಲ್ಲಿರುವ ಶೋಭರಾಜ್ನನ್ನು ಆರೋಗ್ಯ ಸಮಸ್ಯೆಗಳ ಕಾರಣದಿಂದ ಜೈಲಿನಿಂದ ಬಿಡುಗಡೆ ಮಾಡಲು ಕೋರ್ಟ್ ಆದೇಶಿಸಿದೆ. ಆತನನ್ನು ನಿರಂತರವಾಗಿ ಜೈಲಿನಲ್ಲಿ ಇಡುವುದು ಕೈದಿಯೊಬ್ಬನ ಮಾನವ ಹಕ್ಕುಗಳ ಉಲ್ಲಂಘನೆಯಾದಂತೆ ಎಂದು ಕೋರ್ಟ್ ಆದೇಶದಲ್ಲಿ ಹೇಳಿದೆ.
ಆತನ ವಿರುದ್ಧ ಯಾವುದೇ ಬಾಕಿ ಪ್ರಕರಣಗಳಿಲ್ಲದಿದ್ದರೆ, ಈ ನ್ಯಾಯಾಲಯವು ಅವನನ್ನು ಇಂದಿನೊಳಗೆ ಬಿಡುಗಡೆ ಮಾಡುವಂತೆ ಮತ್ತು 15 ದಿನಗಳಲ್ಲಿ ಶೋಭರಾಜ್ನನ್ನು ಅವನ ದೇಶಕ್ಕೆ ಹಿಂತಿರುಗಿ ಕಳುಹಿಸಲು ಆದೇಶಿಸುತ್ತದೆ ಎಂದು ಕೋರ್ಟ್ ಹೇಳಿದೆ.
ಆಧ್ಯಾತ್ಮದ ಹೆಸರಲ್ಲಿ, ಡ್ರಗ್ಸ್ ಬಲೆಗೆ ಬೀಳಿಸುತ್ತಿದ್ದ ಚಾಲಾಕಿ.. ಬಾಲ್ಯದಲ್ಲಿಯೇ ತುಂಬಾ ಕಿಲಾಡಿಯಾಗಿದ್ದ ಮತ್ತು ಅಪರಾಧ ಮನೋಭಾವನೆ ಹೊಂದಿದ್ದ ಶೋಭರಾಜ್ ಚಿಕ್ಕ ಪುಟ್ಟ ಅಪರಾಧಗಳಿಗಾಗಿ ಫ್ರಾನ್ಸ್ ಜೈಲುಗಳಲ್ಲಿ ಅನೇಕ ಬಾರಿ ಶಿಕ್ಷೆ ಅನುಭವಿಸಿದ್ದ. 1970ರ ಸುಮಾರಿಗೆ ಪ್ರಪಂಚದಾದ್ಯಂತ ಸುತ್ತಾಡಲು ಆರಂಭಿಸಿದ ಆತ ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್ನಲ್ಲಿ ಇರಲಾರಂಭಿಸಿದ್ದ. ಈತ ಆಧ್ಯಾತ್ಮದ ಹೆಸರಿನಲ್ಲಿ ಶ್ರೀಮಂತ ಹಾಗೂ ಚೆಲುವೆಯರನ್ನು ಪ್ರೀತಿಯ ಬಲೆಗೆ ಬೀಳಿಸಿಕೊಂಡು ಅವರಿಗೆ ಡ್ರಗ್ಸ್ ಚಟ ಅಂಟಿಸುತ್ತಿದ್ದ. ನಂತರ ಅವರ ಬಳಿಯ ಹಣ ಲೂಟಿ ಮಾಡಿ ಕೊಂದು ಹಾಕುತ್ತಿದ್ದ.
ಬಿಕಿನಿ ಕಿಲ್ಲರ್ ಹೆಸರು ಬಂದಿದ್ದು ಹೀಗೆ.. ಮೃದುಭಾಷಿ ಮತ್ತು ಆಧುನಿಕ ಯುವಕನಂತೆ ಕಾಣುತ್ತಿದ್ದ ಆತ ತಾನು ಮಾಡಿದ ಮೊದಲನೇ ಕೊಲೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸಿದ್ದ. 1975 ರಲ್ಲಿ ಈತ ಮೊದಲ ಬಾರಿ ಅಮೆರಿಕ ಮೂಲದ ಮಹಿಳೆಯೊಬ್ಬಳನ್ನು ಕೊಲೆ ಮಾಡಿದ್ದ. ಆಕೆಯ ಬಿಕಿನಿ ಧರಿಸಿದ್ದ ಮೃತದೇಹ ಪಟ್ಟಾಯಾ ಕಡಲತೀರದಲ್ಲಿ ಪತ್ತೆಯಾಗಿತ್ತು. ಇದಕ್ಕಾಗಿಯೇ ಈತನಿಗೆ ಬಿಕಿನಿ ಕಿಲ್ಲರ್ ಎಂಬ ಕುಖ್ಯಾತಿಯೂ ಬಂದಿತ್ತು.