ನ್ಯೂಯಾರ್ಕ್ (ಅಮೆರಿಕ): ಅಮೆರಿಕದ ಬ್ಯಾಂಕಿಂಗ್ ವಲಯದಲ್ಲಿ ದೊಡ್ಡ ಬಿಕ್ಕಟ್ಟು ಉದ್ಭವಿಸಿದೆ. ಬ್ಯಾಂಕ್‌ಗಳು ಪತನದ ಸ್ಥಿತಿಗೆ ಬಂದು ತಲುಪಿವೆ. ಕ್ಯಾಲಿಫೋರ್ನಿಯಾ ಮೂಲದ ಎರಡು ಬ್ಯಾಂಕ್‌ಗಳು ಒಂದು ವಾರದೊಳಗೆ ಪತನಗೊಂಡಿವೆ. ಈಗ ಫಸ್ಟ್ ರಿಪಬ್ಲಿಕ್ ಬ್ಯಾಂಕ್ (First Republic Bank) ಕೂಡ ಇದೇ ಸ್ಥಿತಿಗೆ ಬಂದಿದೆ. ಆದರೆ, ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಹನ್ನೊಂದು ದೊಡ್ಡ ಬ್ಯಾಂಕ್‌ಗಳು ಫಸ್ಟ್ ರಿಪಬ್ಲಿಕ್ ಬ್ಯಾಂಕ್‌ಗೆ 30 ಬಿಲಿಯನ್ ಡಾಲರ್ ಪಾರುಗಾಣಿಕಾ ಪ್ಯಾಕೇಜ್ (Rescue Package) ಘೋಷಿಸಿವೆ.
ನಾಲ್ಕು ದಿನಗಳ ಹಿಂದೆ ಸ್ಟಾರ್ಟಪ್ಗಳಿಗೆ ಹಣ ನೀಡುತ್ತಿದ್ದ ಸಿಲಿಕಾನ್ ವ್ಯಾಲಿ ಬ್ಯಾಂಕ್ (Silicon Valley Bank) ಪತನವಾಗಿತ್ತು. ಈ ಬ್ಯಾಂಕ್‌ನಂತೆಯೇ ಫಸ್ಟ್ ರಿಪಬ್ಲಿಕ್ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ. ಠೇವಣಿದಾರರು ಕೆಲವೇ ಗಂಟೆಗಳಲ್ಲಿ 40 ಬಿಲಿಯನ್ ಡಾಲರ್ ಹಣವನ್ನು ಹಿಂತೆಗೆದುಕೊಂಡ ಪರಿಣಾಮ ಈ ಪತನದ ಅಂಚಿಗೆ ಬಂದಿತ್ತು. ಡಿಸೆಂಬರ್ 31ರಂದು 176.4 ಬಿಲಿಯನ್ ಡಾಲರ್ ಮೊತ್ತದ ಠೇವಣಿಗಳನ್ನು ಹೊಂದಿತ್ತು. ಆದರೆ, ಇದೀಗ ಠೇವಣಿಗಳ ಹಿಂತೆಗೆದುಕೊಂಡ ಕಾರಣ ಫಸ್ಟ್ ರಿಪಬ್ಲಿಕ್ ಕೂಡ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಈ ಕುರಿತ ಹೇಳಿಕೆ ಬಿಡುಗಡೆ ಮಾಡಿದ್ದು, ಫೆಡರಲ್ ಠೇವಣಿ ವಿಮಾ ನಿಗಮದಿಂದ ವಿಮೆ ಮಾಡಲಾದ 2,50,000 ಡಾಲರ್ಗೂ ಅಧಿಕ ಹಿಂಪಡೆಯುವಿಕೆಯನ್ನು ಬ್ಯಾಂಕ್ ಎದುರಿಸಿದೆ ಎಂದು ಖಚಿತ ಪಡಿಸಿದೆ.
2008ರ ಆರ್ಥಿಕ ಬಿಕ್ಕಟ್ಟಿನ ನೆನಪು: ಇತ್ತೀಚಿಗೆ ಫಸ್ಟ್ ರಿಪಬ್ಲಿಕ್ ಬ್ಯಾಂಕ್ ಜೆಪಿ ಮೋರ್ಗಾನ್ ಮತ್ತು ಫೆಡರಲ್ ರಿಸರ್ವ್‌ನಿಂದ ಹೆಚ್ಚುವರಿ ಹಣವನ್ನು ಪಡೆಯಲಾಗಿದೆ ಎಂದು ಹೇಳಿಕೊಂಡಿತ್ತು. ಈ ಹೇಳಿಕೆ ನಂತರವೂ ಫಸ್ಟ್ ರಿಪಬ್ಲಿಕ್ ಷೇರುಗಳು ಸೋಮವಾರ ಶೇ.60ಕ್ಕಿಂತ ಹೆಚ್ಚು ಕುಸಿತ ಕಂಡಿದ್ದವು. ಇದೀಗ ಪಾರುಗಾಣಿಕಾ ಪ್ಯಾಕೇಜ್ 2008ರ ಆರ್ಥಿಕ ಬಿಕ್ಕಟ್ಟಿನ (2008 financial crisis) ನೆನಪಿಸುವಂತಿದೆ.