ಇಲಿನಾಯ್ಸ್: ಇಸ್ರೇಲ್‌ನೊಂದಿಗೆ ನಡೆಯುತ್ತಿರುವ ಯುದ್ಧದ ನಡುವೆ ಅಮೆರಿಕ ಮೂಲದ ಓರ್ವ ಮಹಿಳೆ ಮತ್ತು ಅವರ ಪುತ್ರಿಯನ್ನು ಹಮಾಸ್ ಬಿಡುಗಡೆ ಮಾಡಿದೆ. ಎರಡು ವಾರಗಳ ಹಿಂದೆ ಅಂದ್ರೆ ಅಕ್ಟೋಬರ್ 7 ರಂದು ಇಸ್ರೇಲ್ ದಾಳಿಯ ನಂತರ ಅಮೆರಿಕಾದ ತಾಯಿ, ಮಗಳನ್ನು ಹಮಾಸ್ ಒತ್ತೆಯಾಳಾಗಿ ಇಟ್ಟುಕೊಂಡಿತ್ತು. ಹಮಾಸ್‌ನಿಂದ ಬಿಡುಗಡೆಗೊಂಡ ಅಮೆರಿಕದ ತಾಯಿ ಮತ್ತು ಮಗಳು ಕೂಡ ಇಸ್ರೇಲ್ ಪೌರತ್ವವನ್ನು ಹೊಂದಿದ್ದಾರೆ. ಈ ಇಬ್ಬರೂ ಪ್ರಸ್ತುತ ಇಸ್ರೇಲ್‌ನಲ್ಲಿ ಇಸ್ರೇಲಿ ಅಧಿಕಾರಿಗಳೊಂದಿಗೆ ಸುರಕ್ಷಿತವಾಗಿದ್ದಾರೆ. ಕತಾರ್ ಸರ್ಕಾರದೊಂದಿಗಿನ ಒಪ್ಪಂದದ ಅಡಿಯಲ್ಲಿ ಅವರನ್ನು ಬಿಡುಗಡೆ ಮಾಡುತ್ತಿರುವುದಾಗಿ ಹಮಾಸ್ ಹೇಳಿದೆ.
ಹಮಾಸ್ ಕಪಿಮುಷ್ಠಿಯಿಂದ ತಾಯಿ-ಮಗಳು ಬಿಡುಗಡೆಯಾದ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಸಂತಸ ವ್ಯಕ್ತಪಡಿಸಿ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಇಸ್ರೇಲ್ ವಿರುದ್ಧ ಭೀಕರ ದಾಳಿಯ ಸಂದರ್ಭದಲ್ಲಿ ಹಮಾಸ್ ಒತ್ತೆಯಾಳಾಗಿದ್ದ ಇಬ್ಬರು ಅಮೆರಿಕನ್ನರು ಬಿಡುಗಡೆಯಾಗಿದ್ದಾರೆ. ನಮ್ಮ ನಾಗರಿಕರು ಕಷ್ಟಗಳನ್ನು ಸಹಿಸಿಕೊಂಡಿದ್ದಾರೆ. ಕಳೆದ 14 ದಿನಗಳಲ್ಲಿ ಭಯಾನಕ ಅಗ್ನಿಪರೀಕ್ಷೆ ನಂತರ ಅವರು ಶೀಘ್ರದಲ್ಲೇ ತಮ್ಮ ಕುಟುಂಬಸ್ಥರನ್ನು ಸೇರಲಿದ್ದಾರೆ ಎಂಬುದು ನನಗೆ ತುಂಬಾ ಸಂತೋಷವಾಗಿದೆ ಎಂದು ಎಕ್ಸ್ನಲ್ಲಿ ಬೈಡನ್ ಬರೆದುಕೊಂಡಿದ್ದಾರೆ.
ತನ್ನ ಪ್ರಜೆಗಳನ್ನು ಬಿಡುಗಡೆ ಮಾಡಿರುವುದನ್ನು ಅಮೆರಿಕ ಸ್ವಾಗತಿಸಿದೆ. ಅವರ ಬಿಡುಗಡೆಯನ್ನು ನಾವು ಸ್ವಾಗತಿಸುತ್ತೇವೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಹೇಳಿದ್ದಾರೆ. ಆದರೆ ಈ ಯುದ್ಧದಲ್ಲಿ 10 ಅಮೆರಿಕನ್ ನಾಗರಿಕರು ಇನ್ನೂ ಕಾಣೆಯಾಗಿದ್ದಾರೆ. ಅವರಲ್ಲಿ ಕೆಲವರನ್ನು ಹಮಾಸ್ ಒತ್ತೆಯಾಳಾಗಿ ಇರಿಸಿರಬಹುದು ಎಂದು ನಮಗೆ ತಿಳಿದಿದೆ. ಹಮಾಸ್ ಇನ್ನೂ 200 ಕ್ಕೂ ಹೆಚ್ಚು ಜನರನ್ನು ಒತ್ತೆಯಾಳಾಗಿ ಇರಿಸಿದೆ. ಇವರಲ್ಲಿ ಅನೇಕ ದೇಶಗಳ ಪುರುಷರು, ಮಹಿಳೆಯರು, ಯುವಕರು, ಬಾಲಕಿಯರು, ವೃದ್ಧರು ಸೇರಿದ್ದಾರೆ ಎಂದು ಬ್ಲಿಂಕನ್ ಹೇಳಿದರು.
ಉಳಿದ ಒತ್ತೆಯಾಳುಗಳು ತಮ್ಮ ಮನೆಗಳಿಗೆ ಮರಳುವುದನ್ನು ಖಚಿತಪಡಿಸಿಕೊಳ್ಳಲು ಇಡೀ ಯುಎಸ್ ಸರ್ಕಾರವು ಪ್ರತಿದಿನ.. ಪ್ರತಿ ನಿಮಿಷವೂ.. ಕೆಲಸ ಮಾಡುತ್ತದೆ. ಒತ್ತೆಯಾಳುಗಳ ಬಿಡುಗಡೆಯನ್ನು ಖಾತ್ರಿಪಡಿಸಿದ್ದಕ್ಕಾಗಿ ಕತಾರ್ ಸರ್ಕಾರಕ್ಕೆ ನಮ್ಮ ಧನ್ಯವಾದಗಳು ಎಂದು ಬ್ಲಿಂಕನ್ ಹೇಳಿದರು.