ವಾಷಿಂಗ್ಟನ್: ಉಕ್ರೇನ್ ರಾಜಧಾನಿ ಕೀವ್ ಮತ್ತು ಚೆರ್ನಿಹಿವ್ ಮೇಲೆ ಯುದ್ಧ ಕಡಿತ ಮಾಡುವುದಾಗಿ ರಷ್ಯಾ ನಿನ್ನೆ ಘೋಷಣೆ ಮಾಡಿರುವ ಬೆನ್ನಲ್ಲೇ ಈ ಬಗ್ಗೆ ಅಮೆರಿಕ ಅನುಮಾನ ವ್ಯಕ್ತಪಡಿಸಿದೆ.
ಶ್ವೇತಭವನದಲ್ಲಿ ಸಿಂಗಾಪುರದ ಪ್ರಧಾನಿ ಲೀ ಸಿಯೆನ್ ಲೂಂಗ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆಗಳ ನಂತರ ಮಾತನಾಡಿದ ಅಧ್ಯಕ್ಷ ಜೋ ಬೈಡನ್, ಕೀವ್ ಬಳಿ ಸೇನಾ ಕಾರ್ಯಾಚರಣೆ ಕಡಿತ ಮಾಡುವ ರಷ್ಯಾದ ಘೋಷಣೆಯು ಯುದ್ಧದಲ್ಲಿ ಮೂಲಭೂತ ಬದಲಾವಣೆಗೆ ಕಾರಣವಾಗುತ್ತದೆ ಎಂದು ತನಗೆ ಇನ್ನೂ ಮನವರಿಕೆಯಾಗಿಲ್ಲ ಎಂದು ಹೇಳಿದ್ದಾರೆ.
ಉಕ್ರೇನ್ ಜೊತೆ ಮಾತುಕತೆಯಲ್ಲಿ ರಷ್ಯಾ ಎಂತಹ ಆಫರ್ ನೀಡುತ್ತದೆ ಮತ್ತು ತನ್ನ ಸೈನ್ಯವನ್ನು ಹೇಗೆ ಮರು ಹೊಂದಿಸುತ್ತದೆ ಎಂಬುದನ್ನು ನೋಡಲು ಕಾಯುತ್ತಿದ್ದೇನೆ ಎಂದಿದ್ದಾರೆ. ಟರ್ಕಿಯಲ್ಲಿ ಉಕ್ರೇನ್ ಮತ್ತು ರಷ್ಯಾದ ಅಧಿಕಾರಿಗಳ ನಡುವೆ ನಡೆಯುತ್ತಿರುವ ಮಾತುಕತೆಗಳಲ್ಲಿ ನಂಬಿಕೆಯನ್ನು ಹೆಚ್ಚಿಸುವ ಪ್ರಯತ್ನದಲ್ಲಿ ಕಾರ್ಯಾಚರಣೆ ಕಡಿತ ಮಾಡುವುದಾಗಿ ಮಂಗಳವಾರ ರಷ್ಯಾ ಘೋಷಣೆಯ ಬಗ್ಗೆ ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳು ಸಂದೇಹ ವ್ಯಕ್ತಪಡಿಸಿವೆ.