ವಾಷಿಂಗ್ಟನ್ (ಅಮೆರಿಕ):ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡನ್ ಆಯ ತಪ್ಪಿ ಮುಗ್ಗರಿಸಿ ಬಿದ್ದ ಘಟನೆ ನಡೆದಿದೆ. ಕೊಲೊರಾಡೋದ ಯುಎಸ್ ಏರ್ ಫೋರ್ಸ್ ಅಕಾಡೆಮಿಯಲ್ಲಿ ಪದವಿ ಕಾರ್ಯಕ್ರಮದ ಸಂದರ್ಭದಲ್ಲಿ ಡಿಪ್ಲೊಮಾಗಳನ್ನು ಹಸ್ತಾಂತರಿಸಿದ ಅಧ್ಯಕ್ಷ ಜೋ ಬೈಡನ್ ಮರಳಿನ ಚೀಲಕ್ಕೆ ಎಡವಿ ಮುಗ್ಗರಿಸಿ ವೇದಿಕೆಯ ಮೇಲೆ ಬಿದ್ದರು. ತಕ್ಷಣ ಹತ್ತಿರದಲ್ಲಿದ್ದ ಸಿಬ್ಬಂದಿ ಅವರನ್ನು ಮತ್ತೆ ಎಬ್ಬಿಸಿ ನಿಲ್ಲಿಸಿದರು. ಬೈಡನ್ ಆವರಿಗೆ ಯಾವುದೇ ಗಾಯವಾಗಿಲ್ಲ ಹಾಗೂ ಅವರು ಚೆನ್ನಾಗಿದ್ದಾರೆ ಎಂದು ಶ್ವೇತ ಭವನದ ಪ್ರಕಟಣೆ ತಿಳಿಸಿದೆ.
ಗುರುವಾರ ನಡೆದ ಕಾರ್ಯಕ್ರಮದಲ್ಲಿ 80 ವರ್ಷ ವಯಸ್ಸಿನ ದೇಶದ ಅತ್ಯಂತ ಹಿರಿಯ ಅಧ್ಯಕ್ಷರಾಗಿರುವ ಬೈಡನ್, 921 ಪದವೀಧರ ಕೆಡೆಟ್‌ಗಳಲ್ಲಿ ಪ್ರತಿಯೊಬ್ಬರೊಂದಿಗೆ ಹಸ್ತಲಾಘವ ಮಾಡಲು ಸುಮಾರು ಒಂದೂವರೆ ಗಂಟೆಗಳ ಕಾಲ ನಿಂತಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಬೈಡನ್ ಸೆಂಟರ್ ಸ್ಟೇಜ್‌ನಿಂದ ಬದಿಗೆ ಹೋಗಲು ನಡೆಯುತ್ತಿರುವಾಗ ನೆಲಕ್ಕೆ ಬಿದ್ದರು. ಅಧ್ಯಕ್ಷರು ತಮ್ಮ ಬಲಗಡೆ ಸೊಂಟ ನೆಲಕ್ಕೆ ತಾಕುವ ಹಾಗೆ ಬಿದ್ದಿದ್ದು, ನಂತರ ಬಲಗೈ ಊರಿ ಮೇಲೆ ಎದ್ದರು. ಏರ್ ಫೋರ್ಸ್ ಅಕಾಡೆಮಿಯ ಓರ್ವ ಅಧಿಕಾರಿ ಮತ್ತು ಇಬ್ಬರು ಸೀಕ್ರೆಟ್ ಸರ್ವಿಸ್ ಏಜೆಂಟ್‌ಗಳನ್ನು ಒಳಗೊಂಡ ವ್ಯಕ್ತಿಗಳು ಬೈಡನ್ ಮತ್ತೆ ಎದ್ದು ನಿಲ್ಲಲು ಆಸರೆ ನೀಡಿದರು.
ಎದ್ದ ನಂತರ ಅಧ್ಯಕ್ಷರು ಟೆಲಿಪ್ರೊಂಪ್ಟರ್ ಸಲುವಾಗಿ ಇಡಲಾಗಿದ್ದ ಎರಡು ಮರಳಿನ ಚೀಲಗಳ ಪೈಕಿ ಒಂದನ್ನು ತೋರಿಸಿ ಅದನ್ನು ಎಡವಿ ಬಿದ್ದಿರುವುದಾಗಿ ಹೇಳಿರುವಂತೆ ದೃಶ್ಯಾವಳಿಗಳಲ್ಲಿ ಕಾಣಿಸಿದೆ. ಅವಘಡದ ಸ್ವಲ್ಪ ಸಮಯದ ನಂತರ ಸಮಾರಂಭ ಕೊನೆಗೊಂಡಾಗ ಅವರು ಯಾರದೇ ಸಹಾಯವಿಲ್ಲದೆ ತಮ್ಮ ಆಸನಕ್ಕೆ ಹಿಂತಿರುಗಿದರು ಮತ್ತು ನಂತರ ತಮ್ಮ ಮೋಟಾರ್ ಕೇಡ್ ಬಳಿಗೆ ಹಿಂತಿರುಗಿದರು.