ವಾಷಿಂಗ್ಟನ್ (ಅಮೆರಿಕ):''ಇಸ್ರೇಲ್ ಮತ್ತು ಉಕ್ರೇನ್ ತಮ್ಮ ಯುದ್ಧಗಳಲ್ಲಿ ಯಶಸ್ವಿಯಾಗುವುದು ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಪ್ರಮುಖವಾಗಿದೆ'' ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಗುರುವಾರ ರಾತ್ರಿ ಓವಲ್ ಆಫೀಸ್ನಲ್ಲಿ ಮಾತನಾಡಿದ ಅವರು, ''ಎರಡೂ ದೇಶಗಗಳು ಮಿಲಿಟರಿ ಸಹಾಯಕ್ಕಾಗಿ ಶತಕೋಟಿ ಡಾಲರ್‌ಗಳನ್ನು ಕೇಳುವ ಸಾಧ್ಯತೆಯಿದೆ'' ಎಂದ ತಿಳಿಸಿದರು.
ಹಮಾಸ್, ಪುಟಿನ್ನಿಂದ ವಿಭಿನ್ನ ಬೆದರಿಕೆಗಳು:''ಅಂತಾರಾಷ್ಟ್ರೀಯ ಆಕ್ರಮಣವನ್ನು ಮುಂದುವರಿಸಲು ಅನುಮತಿಸಿದರೆ, ಪ್ರಪಂಚದ ಇತರ ಭಾಗಗಳಲ್ಲಿ ಸಂಘರ್ಷ ಮತ್ತು ಅವ್ಯವಸ್ಥೆ ಹರಡಬಹುದು'' ಎಂದ ಅವರು, ಹಮಾಸ್ ಮತ್ತು ಪುಟಿನ್ ವಿಭಿನ್ನ ಬೆದರಿಕೆಗಳನ್ನು ಪ್ರತಿನಿಧಿಸುತ್ತಿದ್ದಾರೆ. ಅವರಿಬ್ಬರೂ ನೆರೆಯ ಪ್ರಜಾಪ್ರಭುತ್ವವವನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲು ಬಯಸಿದ್ದಾರೆ ಎಂದು ಕಿಡಿಕಾರಿದರು.
ಮಾನವೀಯ ಸಹಾಯಕ್ಕೆ ಒತ್ತಾಯ:ಕಾಂಗ್ರೆಸ್‌ಗೆ ತುರ್ತು ನಿಧಿ ಒದಗಿಸುವ ಬಗ್ಗೆ ವಿನಂತಿಯನ್ನು ಕಳುಹಿಸುವುದಾಗಿ ಹೇಳಿದ ಬೈಡನ್ ಅವರು, ಇದು ಮುಂದಿನ ವರ್ಷದಲ್ಲಿ ಸರಿಸುಮಾರು 100 ಬಿಲಿಯನ್ ಡಾಲರ್ ಆಗುವ ನಿರೀಕ್ಷೆಯಿದೆ. ಅಮೆರಿಕ ಕಾಂಗ್ರೆಸ್ ಎದುರು ಇಂದು ಈ ಸಂಬಂಧ ಪ್ರಸ್ತಾವನೆ ಸಲ್ಲಿಕೆ ಆಗಲಿದ್ದು, ಉಕ್ರೇನ್, ಇಸ್ರೇಲ್, ತೈವಾನ್, ಮಾನವೀಯ ನೆರವು ಮತ್ತು ಗಡಿ ನಿರ್ವಹಣೆಗೆ ಈ ಹಣ ಬಳಕೆಯಾಗಲಿದೆ ಎಂದು ಅವರು ತಿಳಿಸಿದರು. ''ಇದು ತಲೆಮಾರುಗಳವರೆಗೆ ಅಮೆರಿಕದ ಭದ್ರತೆ ಒದಗಿಸುವುದಕ್ಕಾಗಿ ಸರ್ಕಾರ ಕೈಗೊಂಡ ಕ್ರಮವಾಗಿದೆ. ಇದನ್ನು ದೇಶದ ಭದ್ರತೆಗಾಗಿ ಮಾಡಿದ ಸ್ಮಾರ್ಟ್ ಹೂಡಿಕೆ ಎಂದು ಅವರು ಬಣ್ಣಿಸಿದ್ದಾರೆ. ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಕಾಂಗ್ರೆಸ್ ಅನುಮೋದನೆಗೆ ಪೂರಕವಾದ ರಾಜಕೀಯ ಒಕ್ಕೂಟ ರಚನೆಯಾಗಲಿದೆ ಎಂದು ಬೈಡನ್ ಆಶಯ ವ್ಯಕ್ತಪಡಿಸಿದರು. ಜೊತೆಗೆ ಗಾಜಾ ಪಟ್ಟಿಯಲ್ಲಿರುವ ಪ್ಯಾಲೆಸ್ಟೀನಿಯರಿಗೆ ಹೆಚ್ಚಿನ ಮಾನವೀಯ ಸಹಾಯಕ್ಕಾಗಿ ಒತ್ತಾಯಿಸಿದರು.
ಬೈಡನ್ ಅವರು, ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಮಾತನಾಡಿದ್ದಾರೆ. ''ಕೈವ್ ಅನ್ನು ಬೆಂಬಲಿಸಲು ಅಮೆರಿಕ ಬದ್ಧವಾಗಿದೆ ಎಂದು ಬೈಡನ್ ಒತ್ತಿ ಹೇಳಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.