ಭ್ರಷ್ಟಾಚಾರ ಪ್ರಕರಣದಲ್ಲಿ ಇಮ್ರಾನ್ ಖಾನ್ ಅವರಿಗೆ ಶನಿವಾರ ಶಿಕ್ಷೆ ವಿಧಿಸಲಾಗಿದ್ದು, ಅಷ್ಟೇ ತ್ವರಿತವಾಗಿ ಅವರನ್ನು ಬಂಧಿಸಲಾಗಿದೆ. ಈ ಮೂಲಕ ಮಾಜಿ ಪ್ರಧಾನ ಮಂತ್ರಿಗಳನ್ನು ಜೈಲಿಗೆ ಹಾಕುವ ಕುಖ್ಯಾತಿಯನ್ನು ಪಾಕಿಸ್ತಾನ ಮುಂದುವರೆಸಿದಂತಾಗಿದೆ. ಭ್ರಷ್ಟಾಚಾರ ಪ್ರಕರಣಗಳಲ್ಲಿ ಮಾಜಿ ಪ್ರಧಾನಿಗಳನ್ನು ಜೈಲಿಗೆ ಹಾಕಿದರೂ, ಸಂವಿಧಾನವನ್ನು ಪದೇ ಪದೇ ಉಲ್ಲಂಘಿಸುವ ಮಿಲಿಟರಿ ಸರ್ವಾಧಿಕಾರಿಗಳ ವಿರುದ್ಧ ಮಾತ್ರ ಪಾಕಿಸ್ತಾನದಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳಲು ಹಿಂಜರಿಯಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಸರ್ಕಾರಕ್ಕೆ ಬಂದ ತೋಶಖಾನಾದಲ್ಲಿನ ಸರ್ಕಾರಿ ಉಡುಗೊರೆಗಳ ಮಾರಾಟದಿಂದ ಬಂದ ಲಾಭವನ್ನು ಮರೆಮಾಚಿದ ಆರೋಪದ ಮೇಲೆ ಇಸ್ಲಾಮಾಬಾದ್ ಮೂಲದ ಸೆಷನ್ಸ್ ನ್ಯಾಯಾಲಯವು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥ ಖಾನ್ ಅವರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಶಿಕ್ಷೆ ಪ್ರಕಟವಾಗುತ್ತಿದ್ದಂತೆಯೇ ಅವರನ್ನು ಲಾಹೋರ್ನ ಅವರ ಜಮಾನ್ ಪಾರ್ಕ್ ನಿವಾಸದಿಂದ ಬಂಧಿಸಲಾಯಿತು.
ತೋಶಖಾನಾ ಇದು ಕ್ಯಾಬಿನೆಟ್ ವಿಭಾಗದ ಅಡಿಯಲ್ಲಿನ ಇಲಾಖೆಯಾಗಿದ್ದು, ಆಡಳಿತದಲ್ಲಿರುವವರು ಮತ್ತು ಸರ್ಕಾರಿ ಅಧಿಕಾರಿಗಳಿಗೆ ವಿದೇಶಿ ಸರ್ಕಾರಗಳ ಮುಖ್ಯಸ್ಥರು ಮತ್ತು ವಿದೇಶಿ ಗಣ್ಯರು ನೀಡಿದ ಉಡುಗೊರೆಗಳನ್ನು ಸಂಗ್ರಹಿಸಿ ಇಡುತ್ತದೆ. ಇಮ್ರಾನ್ ಖಾನ್ ಅವರು ಸೌದಿ ರಾಜಕುಮಾರ ನೀಡಿದ ಅಮೂಲ್ಯ ಗಡಿಯಾರ ಸೇರಿದಂತೆ ಕೆಲ ಉಡುಗೊರೆಗಳನ್ನು ಖರೀದಿಸಿ ಅವನ್ನು ಹೆಚ್ಚಿನ ಲಾಭಕ್ಕೆ ಬೇರೊಬ್ಬರಿಗೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರಧಾನಿಯಾಗಿದ್ದಾಗ ಇಮ್ರಾನ್ ಅವರಿಗೆ ತೋಶಾಖಾನಾದಿಂದ ಉಡುಗೊರೆಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಅಧಿಕಾರವಿತ್ತು. ಆದರೆ ಹೀಗೆ ಮಾರಾಟದಿಂದ ಬಂದ ಲಾಭವನ್ನು ಅವರು ಪಾಕಿಸ್ತಾನದ ಚುನಾವಣಾ ಆಯೋಗಕ್ಕೆ ತಿಳಿಸಲಿಲ್ಲ. ಇದು ಕಾನೂನಿನ ಅಡಿಯಲ್ಲಿ ಅಪರಾಧವಾಗಿದೆ. ಅಧಿಕಾರ ಕಳೆದುಕೊಂಡು ರಾಜಕೀಯವಾಗಿ ಒಬ್ಬಂಟಿಯಾಗಿರುವ ಇಮ್ರಾನ್ ಖಾನ್ ಈಗ ಈ ಪ್ರಕರಣದಲ್ಲಿ ಜೈಲುಪಾಲಾಗಿದ್ದಾರೆ.
ಖಾನ್ ಜೈಲಿಗೆ ಹೋದ ಮೊದಲ ಪಾಕಿಸ್ತಾನಿ ಪ್ರಧಾನಿಯೇನೂ ಅಲ್ಲ. ಮಾಜಿ ಪ್ರಧಾನಿಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುವ ಪರಂಪರೆ ಪಾಕಿಸ್ತಾನದಲ್ಲಿ ದಶಕಗಳಿಂದಲೂ ನಡೆದುಕೊಂಡು ಬಂದಿದೆ.
ಹುಸೇನ್ ಶಹೀದ್ ಸುಹ್ರಾವರ್ದಿ: ಐದನೇ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಪೂರ್ವ ಪಾಕಿಸ್ತಾನದ ಬಂಗಾಳಿ ರಾಜಕಾರಣಿ ಹುಸೇನ್ ಶಹೀದ್ ಸುಹ್ರಾವರ್ದಿ ಈ ಪಟ್ಟಿಯಲ್ಲಿ ಮೊದಲಿಗರಾಗಿದ್ದಾರೆ. 1962ರ ಜನವರಿಯಲ್ಲಿ ಅವರನ್ನು ಬಂಧಿಸಿ, ದೇಶ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಜೈಲಿಗೆ ಹಾಕಲಾಗಿತ್ತು. ಮಿಲಿಟರಿ ಆಡಳಿತಗಾರ ಜನರಲ್ ಅಯೂಬ್ ಖಾನ್ ಅವರನ್ನು ಬೆಂಬಲಿಸಲು ನಿರಾಕರಿಸಿದ್ದು ಅವರ ನಿಜವಾದ ಅಪರಾಧವಾಗಿತ್ತು.