ಬೆಂಗಳೂರು: ಯುದ್ಧಪೀಡಿತ ಗಾಜಾದಲ್ಲಿ ಮೊಬೈಲ್ ಸಂಪರ್ಕ ಮರುಸ್ಥಾಪಿಸಲು ಸಹಾಯ ಮಾಡಲು ಸಿದ್ಧ ಎಂದು ಹೇಳಿದ ಟೆಸ್ಲಾ ಸಿಇಓ ಎಲೋನ್ ಮಸ್ಕ್ ವಿರುದ್ಧ ಇಸ್ರೇಲ್ ಕೆಂಡಾಮಂಡಲವಾಗಿದೆ. ಮಸ್ಕ್ ಇಂಥ ಪ್ರಯತ್ನ ಮಾಡಿದಲ್ಲಿ ಅದರ ವಿರುದ್ಧ ಹೋರಾಡಲು ತನ್ನಲ್ಲಿರುವ ಎಲ್ಲ ಶಕ್ತಿಯನ್ನು ಬಳಸುವುದಾಗಿ ಮಸ್ಕ್ಗೆ ಇಸ್ರೇಲ್ ಎಚ್ಚರಿಕೆ ನೀಡಿದೆ. ಮಸ್ಕ್ ಒಂದು ವೇಳೆ ಗಾಜಾದಲ್ಲಿ ಸಂವಹನ ವ್ಯವಸ್ಥೆಯನ್ನು ಮರುಸ್ಥಾಪಿಸಿದ್ದೇ ಆದಲ್ಲಿ ಹಮಾಸ್ ಉಗ್ರಗಾಮಿಗಳು ಅದನ್ನು ತಮ್ಮ ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಬಹುದು ಎಂದು ಇಸ್ರೇಲ್ನ ಸಂಪರ್ಕ ಸಚಿವ ಶ್ಲೋಮೊ ಕಾರ್ಹಿ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಸಚಿವ ಶ್ಲೋಮೊ ಕಾರ್ಹಿ, "ಸಂವಹನ ವ್ಯವಸ್ಥೆಯನ್ನು ಹಮಾಸ್ ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಬಹುದು. ಒಂದೊಮ್ಮೆ ಮಸ್ಕ್ ಸಂವಹನ ವ್ಯವಸ್ಥೆಯನ್ನು ಸ್ಥಾಪಿಸುವುದೇ ಆದಲ್ಲಿ ಮೊದಲು ನಮ್ಮ ಕಂದಮ್ಮಗಳು, ಮಕ್ಕಳು, ಹಿರಿಯರು ಹೀಗೆ ಎಲ್ಲರನ್ನೂ ಬಿಡುಗಡೆ ಮಾಡಲಿ ಎಂದು ಹಮಾಸ್ಗೆ ಕಂಡಿಷನ್ ವಿಧಿಸಲಿ. ಅಲ್ಲಿಯವರೆಗೆ ನಮ್ಮ ಸರ್ಕಾರವು ಸ್ಟಾರ್ಲಿಂಕ್ನೊಂದಿಗಿನ ಎಲ್ಲ ಸಂಬಂಧಗಳನ್ನು ಕಡಿದುಕೊಳ್ಳುತ್ತಿದೆ" ಎಂದು ಬರೆದಿದ್ದಾರೆ.
ಗಾಜಾದೊಳಗೆ ನುಗ್ಗಿ ಹಮಾಸ್ ಉಗ್ರರನ್ನು ಸದೆಬಡಿಯಲು ಯತ್ನಿಸುತ್ತಿರುವ ಇಸ್ರೇಲ್ ಶುಕ್ರವಾರ ಗಾಜಾದಲ್ಲಿನ ಇಂಟರ್ನೆಟ್ ಮತ್ತು ಮೊಬೈಲ್ ಸಂಪರ್ಕವನ್ನು ಸ್ಥಗಿತಗೊಳಿಸಿದೆ. ಗಾಜಾದಲ್ಲಿನ ಸುಮಾರು 2.3 ಮಿಲಿಯನ್ ಜನರು ಪರಸ್ಪರ ಮತ್ತು ಹೊರಗಿನ ಪ್ರಪಂಚದೊಂದಿಗೆ ಸಂಪರ್ಕ ಕಡಿದುಕೊಂಡಿದ್ದಾರೆ.