ಬೀಜಿಂಗ್(ಚೀನಾ): ಕೊರೊನಾ ಹೊಸ ಅಲೆ ವೇಗವಾಗಿ ಹರಡುತ್ತಿದ್ದು ರಾಜಧಾನಿ ಬೀಜಿಂಗ್‌ನಲ್ಲಿ ಮತ್ತೆ ಕೋವಿಡ್-19 ನಿರ್ಬಂಧಗಳನ್ನು ಬಿಗಿಗೊಳಿಸಲಾಗಿದೆ. ಎಲ್ಲಾ ರೆಸ್ಟೋರೆಂಟ್ನಲ್ಲಿ ಕುಳಿತು ಭೋಜನ ಮಾಡುವುದನ್ನು ನಿಷೇಧಿಸಲಾಗಿದೆ. ಯುನಿವರ್ಸಲ್ ಸ್ಟುಡಿಯೋಗಳನ್ನು ಮುಚ್ಚಿದ್ದು, ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಲು ಕೋವಿಡ್ ಪರೀಕ್ಷೆಯ ನೆಗೆಟಿವ್ ವರದಿ ಕಡ್ಡಾಯಗೊಳಿಸಲಾಗಿದೆ.
ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಹಿನ್ನೆಲೆಯಲ್ಲಿ ಐದು ದಿನಗಳ ರಜೆ ಇದೆ. ಈ ವೇಳೆ ಕೊರೊನಾ ಪ್ರಕರಣಗಳು ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದ್ದು ನಿರ್ಬಂಧ ವಿಧಿಸಲಾಗಿದೆ. ಇನ್ನೊಂದೆಡೆ, ದಿನದಿಂದ ದಿನಕ್ಕೆ ನಗರದಲ್ಲಿ ಓಮಿಕ್ರಾನ್ ವೇರಿಯಂಟ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಶಾಂಘೈ ನಗರದಲ್ಲಿ ಅತೀ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಸರ್ಕಾರ ಇಲ್ಲಿ ಲಾಕ್‌ಡೌನ್ ವಿಧಿಸಬಹುದು ಎಂಬ ಭಯದಿಂದ ಸ್ಥಳೀಯ ನಿವಾಸಿಗಳು ಕಳೆದ ವಾರದಿಂದಲೇ ಆಹಾರ ಮತ್ತು ದೈನಂದಿನ ಅಗತ್ಯ ವಸ್ತುಗಳನ್ನು ಸಂಗ್ರಹಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.